ಪಾಕಿಸ್ತಾನ ಭಯೋತ್ಪಾದನಾ ಕಾರ್ಖಾನೆ ನಿಲ್ಲಿಸಬೇಕು: ಜಿನೆವಾ ಐಪಿಯು ಸಮಾವೇಶದಲ್ಲಿ ಭಾರತದ ಆಗ್ರಹ
Photo : X/@IndiaUNGeneva
ಜಿನೆವಾ: ಲೆಕ್ಕವಿಲ್ಲದಷ್ಟು ಗಡಿಯಾಚೆಗಿನ ದಾಳಿಗಳನ್ನು ನಡೆಸುತ್ತಿರುವ `ಭಯೋತ್ಪಾದನೆ ಕಾರ್ಖಾನೆಗಳನ್ನು' ಪಾಕಿಸ್ತಾನ ನಿಲ್ಲಿಸಬೇಕು ಎಂದು ಜಿನೆವಾದಲ್ಲಿ ನಡೆಯುತ್ತಿರುವ ಇಂಟರ್ ಪಾರ್ಲಿಮೆಂಟರಿ ಯೂನಿಯನ್(ಐಪಿಯು)ನ 148ನೇ ಸಮಾವೇಶದಲ್ಲಿ ಭಾರತ ಆಗ್ರಹಿಸಿದೆ.
ಸಂಸತ್ತಿನ ರಾಜತಾಂತ್ರಿಕ ವಿಷಯಗಳನ್ನು ಚರ್ಚಿಸುವ ಅಂತರಾಷ್ಟ್ರೀಯ ವೇದಿಕೆಯಲ್ಲಿ ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾವಿಸಲು ಮುಂದಾದ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ ಸಿಂಗ್ `ಪ್ರಜಾಪ್ರಭುತ್ವದ ಹೀನಾಯ ದಾಖಲೆ ಹೊಂದಿರುವ ದೇಶದ ಉಪನ್ಯಾಸ ಹಾಸ್ಯಾಸ್ಪದ' ಎಂದರು. ಭಾರತ ಜಗತ್ತಿನಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವವಾಗಿದೆ ಮತ್ತು ಇತರರಿಗೆ ಮಾದರಿಯಾಗಿದೆ. ಪಾಕಿಸ್ತಾನವು ಇಂತಹ ಅಸಂಬದ್ಧ ಮತ್ತು ಸುಳ್ಳು ಆರೋಪಗಳಿಂದ ಐಪಿಯುನಂತಹ ವೇದಿಕೆಯ ಪ್ರಾಮುಖ್ಯತೆಯನ್ನು ಹಾಳು ಮಾಡುತ್ತಿದೆ ಎಂದು ಸಿಂಗ್ ಹೇಳಿದರು. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಮತ್ತು ಯಾವುದೇ ಪ್ರಚಾರವು ಈ ಸತ್ಯವನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಅಂತರ ಸಂಸದೀಯ ಒಕ್ಕೂಟವು ರಾಷ್ಟ್ರೀಯ ಸಂಸತ್ತುಗಳನ್ನು ಒಟ್ಟುಗೂಡಿಸುವ ಅಂತರಾಷ್ಟ್ರೀಯ ವೇದಿಕೆಯಾಗಿದೆ. ಆದರೆ ಅಸಂಬದ್ಧ ಮತ್ತು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಪಾಕಿಸ್ತಾನ ಈ ವೇದಿಕೆಯ ಘನತೆಗೆ ಕುಂದು ತರುತ್ತಿದೆ ಎಂದು ಸಿಂಗ್ ಖಂಡಿಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವ, ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ಸುಸ್ಥಾಪಿತ ಇತಿಹಾಸವನ್ನು ಹೊಂದಿದೆ. ಜಾಗತಿಕ ಭಯೋತ್ಪಾದನೆಯ ಮುಖವಾದ ಲಾಡೆನ್ ಪಾಕಿಸ್ತಾನದಲ್ಲಿ ಕಂಡುಬಂದಿರುವುದನ್ನು ನೆನಪಿಸುತ್ತಿದ್ದೇವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ನಿಷೇಧಿಸಲ್ಪಟ್ಟಿರುವ ಅತೀ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ಒದಗಿಸಿದ ದೇಶಗಳ ಸಾಲಿನಲ್ಲಿ ಪಾಕಿಸ್ತಾನವೂ ಗುರುತಿಸಿಕೊಂಡಿದೆ . ಇಂತಹ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ನಿಂದಿಸುವ ಬದಲು, ಪಾಕಿಸ್ತಾನ ತನ್ನ ದೇಶದ ಜನರ ಒಳಿತಿಗಾಗಿ ಕಾರ್ಯನಿರ್ವಹಿಸಲಿ ಎಂದು ಹರಿವಂಶ್ ನಾರಾಯಣ ಸಿಂಗ್ ಸಲಹೆ ನೀಡಿದ್ದಾರೆ.