ಬಲವಂತದ ಸ್ಥಳಾಂತರ ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ವಿಶ್ವಸಂಸ್ಥೆ
ಸ್ಥಳಾಂತರಗೊಂಡವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹ
ಜಿನೆವಾ: ಉತ್ತರ ಗಾಝಾದ ನಿವಾಸಿಗಳನ್ನು ಸ್ಥಳಾಂತರಿಸುವ ಇಸ್ರೇಲ್ ನ ಆದೇಶವು ನಾಗರಿಕರ ಬಲವಂತದ ಸ್ಥಳಾಂತರಕ್ಕೆ ಸಮವಾಗಲಿದೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿ ಹೇಳಿದೆ.
ಗಾಝಾದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸಲ್ಪಟ್ಟ ನಾಗರಿಕರಿಗೆ ಸೂಕ್ತ ವಸತಿ, ನೈರ್ಮಲ್ಯ, ಆರೋಗ್ಯ ಸುರಕ್ಷತೆ ಮತ್ತು ಪೋಷಣೆಯನ್ನು ತೃಪ್ತಿಕರ ರೀತಿಯಲ್ಲಿ ಒದಗಿಸಿರುವುದನ್ನು ಖಚಿತಪಡಿಸಿಕೊಳ್ಳಲು ಇಸ್ರೇಲ್ ಯಾವುದೇ ಪ್ರಯತ್ನಗಳನ್ನು ಮಾಡಿರುವಂತೆ ತೋರುತ್ತಿಲ್ಲ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿಯ ವಕ್ತಾರೆ ರವೀನಾ ಶಾಂದಾಸಾನಿ ಹೇಳಿದ್ದಾರೆ.
ಒಕ್ಕಲೆಬ್ಬಿಸುವ(ಸ್ಥಳಾಂತರ) ಮತ್ತು ಗಾಝಾದ ಮೇಲೆ ಸಂಪೂರ್ಣ ಮುತ್ತಿಗೆ ಹೇರುವ ಆದೇಶವು ಕಾನೂನುಬದ್ಧ ತಾತ್ಕಾಲಿಕ ಆದೇಶವೆಂದು ಪರಿಗಣಿಸಲಾಗದು. ಆದ್ದರಿಂದ ಅಂತರಾಷ್ಟ್ರೀಯ ಕಾನೂನು ಉಲ್ಲಂಘಿಸಿದ ಬಲವಂತದ ಸ್ಥಳಾಂತರಕ್ಕೆ ಸಮವಾಗಲಿದೆ. ಇಸ್ರೇಲ್ ಅಧಿಕಾರಿಗಳ ಆದೇಶ ಪಾಲಿಸಿ ಸ್ಥಳಾಂತರಗೊಂಡವರು ಈಗ ಗಾಝಾ ಪಟ್ಟಿಯ ದಕ್ಷಿಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಸೂಕ್ತ ಆಶ್ರಯದ ವ್ಯವಸ್ಥೆ, ತ್ವರಿತವಾಗಿ ಬರಿದಾಗುತ್ತಿರುವ ಆಹಾರ ಸರಬರಾಜು, ನೈರ್ಮಲ್ಯ, ಔಷಧ, ಶುದ್ಧ ನೀರು ಸೇರಿದಂತೆ ಇತರ ಮೂಲ ಅಗತ್ಯಗಳ ಅಲಭ್ಯತೆಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.
‘ಬಲವಂತದ ವರ್ಗಾವಣೆ’ ಎಂಬ ಪದವು ನಾಗರಿಕ ಸಮುದಾಯದ ಬಲವಂತದ ಸ್ಥಳಾಂತರವನ್ನು ವಿವರಿಸುತ್ತದೆ. ಇದು ಮಾನವೀಯತೆಯ ವಿರುದ್ಧದ ಅಪರಾಧವಾಗಿದ್ದು ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಶಿಕ್ಷಾರ್ಹವಾಗಿದೆ. ಈ ಮಧ್ಯೆ, ಗಾಝಾದಲ್ಲಿ ತನ್ನ ಆಹಾರ ಪೂರೈಕೆ ಬರಿದಾಗುತ್ತಿದೆ. ಆದರೆ ಈಜಿಪ್ಟ್ ನ ಅಲ್-ಅರಿಷ್ ನಗರದಲ್ಲಿ ಆಹಾರದ ದಾಸ್ತಾನಿದೆ. ಗಡಿ ದಾಟಲು ಅವಕಾಶ ದೊರೆತೊಡನೆ ಗಾಝಾಕ್ಕೆ ಆಹಾರ ಪೂರೈಕೆಗೆ ಸಿದ್ಧ ಎಂದು ವಿಶ್ವ ಆಹಾರ ಕಾರ್ಯಕ್ರಮದ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗದ ಪ್ರಾದೇಶಿಕ ಸಂವಹನ ಮುಖ್ಯಸ್ಥೆ ಅಬೀರ್ ಇತೆಫಾ ಹೇಳಿದ್ದಾರೆ.
ಆಹಾರ ಮತ್ತು ನೀರು ಪೂರೈಕೆ ಸಮಸ್ಯೆಯ ಜತೆಗೆ ಗಾಝಾದ ವೈದ್ಯಕೀಯ ಮೂಲಸೌಕರ್ಯ ಕ್ಷೇತ್ರಕ್ಕೆ ದುರಸ್ತಿ ಪಡಿಸಲಾಗದಷ್ಟು ಹಾನಿಯಾಗಿದೆ. ಆರೋಗ್ಯ ವ್ಯವಸ್ಥೆ ಪೂರೈಕೆದಾರರು ಸೀಮಿತ ಅವಕಾಶದೊಂದಿಗೆ ಸಂದಿಗ್ಧ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಕಾಲಿಕ ಮತ್ತು ಗುಣಮಟ್ಟದ ಆರೋಗ್ಯ ಸೇವೆಗೆ ಅಡ್ಡಿಯಾಗುತ್ತಿದೆ ಎಂದು ವಿಶ್ವಸಂಸ್ಥೆ ಪ್ರತಿನಿಧಿ ಹೇಳಿದ್ದಾರೆ.