ಪಾಕ್ ಉಪಪ್ರಧಾನಿಯಾಗಿ ವಿದೇಶಾಂಗ ಸಚಿವ ಇಶಾಕ್ ಧರ್ ನೇಮಕ
ಇಶಾಕ್ ಧರ್ | PC : NDTV
ಇಸ್ಲಾಮಾಬಾದ್ : ಪಾಕಿಸ್ತಾನದ ಉಪಪ್ರಧಾನಿಯಾಗಿ ವಿದೇಶಾಂಗ ಸಚಿವ ಇಶಾಕ್ ಧರ್ ಅವರನ್ನು ಪ್ರಧಾನಿ ಶಹಬಾಝ್ ಶರೀಫ್ ಅವರು ರವಿವಾರ ನೇಮಕಗೊಳಿಸಿದ್ದಾರೆ. ಸಂಪುಟ ಸಭೆಯ ಬಿಡುಗಡೆಗೊಳಿಸಿದ ಅಧಿಸೂಚನೆಯ ಮೂಲಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಈ ಹಠಾತ್ ನೇಮಕವನ್ನು ಸರಕಾರ ನಾಯಕತ್ವ ಶ್ರೇಣಿಯೊಳಗಿನ ವ್ಯೂಹಾತ್ಮಕ ನಡೆಯಾಗಿದೆಯಂದು ಪಾಕ್ ಮಾಧ್ಯಮಗಳು ಬಣ್ಣಿಸಿವೆ.
ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್-ಎನ್)ನ ನಾಯಕನಾದ ಇಶಾಕ್ ಧರ್ ಪ್ರಸಕ್ತ ಪಾಕ್ ವಿದೇಶಾಂಗ ಸಚಿವನಾಗಿರುವ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಸಾಮಾನ್ಯ ಹಿತಾಸಕ್ತಿಗಳ ಮಂಡಳಿ(ಸಿಸಿಐ)ಗೂ ಸೇರ್ಪಡೆಗೊಳಿಸಲಾಗಿದೆ.
ಸಿಸಿಐ ಪಾಕಿಸ್ತಾನದ ಪ್ರಮುಖ ನೀತಿ ನಿರ್ಧಾರಕ ಸಂಸ್ಥೆಯಾಗಿದ್ದು, ಗಣನೀಯವಾದ ಅಧಿಕಾರವನ್ನು ಹೊಂದಿದೆ.
ಮಾರ್ಚ್ ತಿಂಗಳ ಆರಂಭದಲ್ಲಿ ಪ್ರಧಾನಿ ಶಹಬಾಝ್ ಶರೀಫ್ ಅವರು ಸಾಮಾನ್ಯ ಹಿತಾಸಕ್ತಿಗಳ ಮಂಡಳಿ (ಸಿಸಿಐ)ಯನ್ನು ಪುನಾರಚನೆಗೊಳಿಸಿದ್ದರು. ವಿತ್ತ ಸಚಿವರ ಬದಲಿಗೆ ವಿದೇಶಾಂಗ ಸಚಿವರನ್ನು ಅದರಲ್ಲಿ ಸೇರ್ಪಡೆಗೊಳಿಸಿದ್ದರು. ರಕ್ಷಣಾ ಸಚಿವ ಖ್ವಾಝಾ ಆಸೀಫ್ ಹಾಗೂ ಕೇಸರಿ ಸಚಿವ ಅಮೀರ್ ಮುಖಾಂ ಅವರನ್ನೂ ಸಮಿತಿಗೆ ಸೇರ್ಪಡೆಗೊಳಿಸಲಾಗಿದೆಯೆಂದು ಅಧಿಸೂಚನೆ ತಿಳಿಸಿದೆ.