ಮಲೇಶ್ಯಾ ಮಾಜಿ ಪ್ರಧಾನಿಯ ಜೈಲುಶಿಕ್ಷೆ ಅವಧಿ ಕಡಿತ
ನಜೀಬ್ ರಝಾಕ್ | Photo: NDTV
ಕೌಲಲಾಂಪುರ: ಭ್ರಷ್ಟಾಚಾರ ಪ್ರಕರಣದಲ್ಲಿ 12 ವರ್ಷ ಜೈಲುಶಿಕ್ಷೆಗೆ ಗುರಿಯಾಗಿರುವ ಮಲೇಶ್ಯಾದ ಮಾಜಿ ಪ್ರಧಾನಿ ನಜೀಬ್ ರಝಾಕ್ ಅವರ ಜೈಲುಶಿಕ್ಷೆಯನ್ನು 6 ವರ್ಷಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಕ್ಷಮಾದಾನ ಮಂಡಳಿ ಹೇಳಿದೆ.
ಬಹುಕೋಟಿ ಡಾಲರ್ ಐಎಂಡಿಬಿ ಹಣಕಾಸು ವಂಚನೆ ಪ್ರಕರಣದಲ್ಲಿ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿದ ಆರೋಪ ಎದುರಿಸುತ್ತಿದ್ದ ರಝಾಕ್ಗೆ 2022ರಲ್ಲಿ 12 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ` ಸೋಮವಾರ ಸಭೆ ನಡೆಸಿದ್ದ ಮಾಜಿ ದೊರೆ ಸುಲ್ತಾನ್ ಅಹ್ಮದ್ಶಾ ನೇತೃತ್ವದ ಕ್ಷಮಾದಾನ ಮಂಡಳಿ ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆಯನ್ನು ಪರಿಗಣಿಸಿ ಮಾಜಿ ಪ್ರಧಾನಿ ನಜೀಬ್ ರಝಾಕ್ ಅವರ ಜೈಲುಶಿಕ್ಷೆಯನ್ನು ಅರ್ಧದಷ್ಟು ಕಡಿತಗೊಳಿಸಲು ಮತ್ತು ಅವರಿಗೆ ವಿಧಿಸಲಾಗಿದ್ದ ದಂಡವನ್ನು 10.6 ದಶಲಕ್ಷ ಡಾಲರ್ ಗೆ ಇಳಿಸಲು ನಿರ್ಧರಿಸಿದೆ. ರಝಾಕ್ರನ್ನು 2028ರಲ್ಲಿ ಬಿಡುಗಡೆಗೊಳಿಸಲಾಗುವುದು ಮತ್ತು ದಂಡ ಪಾವತಿಸಲು ವಿಫಲವಾದರೆ 1 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು' ಎಂದು ಕ್ಷಮಾದಾನ ಮಂಡಳಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.