ಯೆಮನ್ ಯುದ್ಧದ ಆದೇಶದ ಮೇಲೆ ತಂದೆಯ ಸಹಿಯನ್ನು ನಕಲು ಮಾಡಿದ್ದ ಸೌದಿಯ ಯುವರಾಜ : ಮಾಜಿ ಗುಪ್ತಚರ ಅಧಿಕಾರಿ ಆರೋಪ
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ (Photo credit: saudigazette.com.sa)
ರಿಯಾದ್ : ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಯೆಮನ್ ನ ಹೌದಿ ಬಂಡುಗೋರರ ವಿರುದ್ಧ ಸುಮಾರು 10 ವರ್ಷ ಮುಂದುವರಿದ ಯುದ್ಧವನ್ನು ಪ್ರಾರಂಭಿಸಿದ ರಾಜಮನೆತನದ ಆದೇಶದಲ್ಲಿ ತಮ್ಮ ತಂದೆಯ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಸೌದಿ ಅರೆಬಿಯಾದ ಮಾಜಿ ಅಧಿಕಾರಿಯೊಬ್ಬರು ವರದಿಯಲ್ಲಿ ಆರೋಪಿಸಿದ್ದಾರೆ.
`ಯುವರಾಜ ಮುಹಮ್ಮದ್ ಯುದ್ಧವನ್ನು ಘೋಷಿಸುವ ಆದೇಶಕ್ಕೆ ತಮ್ಮ ತಂದೆಯ ಸಹಿಯನ್ನು ನಕಲು ಮಾಡಿರುವುದಾಗಿ ಸೌದಿಯ ಆಂತರಿಕ ಸಚಿವಾಲಯಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ, ನಂಬಲರ್ಹ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ' ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಸೌದಿಯ ಮಾಜಿ ಗುಪ್ತಚರ ಅಧಿಕಾರಿ ಸಾದ್ ಅಲ್-ಜಬ್ರಿ ಹೇಳಿದ್ದಾರೆ.
ಯುವರಾಜ ತನ್ನ ತಂದೆಯ ಸಹಿಯನ್ನು ನಕಲು ಮಾಡಿದ್ದಾರೆ. ಆಗ ದೊರೆಯ ಮಾನಸಿಕ ಸಾಮರ್ಥ್ಯ ಕ್ಷೀಣಿಸುತ್ತಿತ್ತು ಎಂದು ಕೆನಡಾದಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿರುವ ಜಬ್ರಿ ಹೇಳಿದ್ದಾರೆ.
ಜಬ್ರಿಯ ಇಬ್ಬರು ಮಕ್ಕಳು ಪ್ರಕರಣವೊಂದಕ್ಕೆ ಸಂಬಂಧಿಸಿ ಸೌದಿಯಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಜಬ್ರಿ ಓರ್ವ ಕಳಂಕಿತ ಮಾಜಿ ಅಧಿಕಾರಿ ಎಂದು ಸೌದಿ ಅರೆಬಿಯಾ ಪ್ರತಿಕ್ರಿಯಿಸಿದೆ.
2015ರಲ್ಲಿ ಯೆಮನ್ನಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಗೋರರ ವಿರುದ್ಧ ಸೌದಿ ನೇತೃತ್ವದ ಮೈತ್ರಿಪಡೆಗಳ ಯುದ್ಧ ಆರಂಭಗೊಂಡಾಗ ಯುದ್ಧ ಶೀಘ್ರವಾಗಿ ಕೊನೆಗೊಳ್ಳಲಿದೆ ಎಂದು ಆಗ ರಕ್ಷಣಾ ಸಚಿವರಾಗಿದ್ದ ಯುವರಾಜರು ಭರವಸೆ ನೀಡಿದ್ದರು. ಆದರೆ ಸುಮಾರು 10 ವರ್ಷದಿಂದ ಮುಂದುವರಿದ ಯುದ್ಧದಲ್ಲಿ 1,50,000ಕ್ಕೂ ಅಧಿಕ ಮಂದಿ ಹತರಾಗಿದ್ದು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ವಿಪತ್ತನ್ನು ಸೃಷ್ಟಿಸಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.