ಚುನಾವಣಾ ವಂಚನೆ: ಡೊನಾಲ್ಡ್ ಟ್ರಂಪ್ ಬಂಧನ; ಜಾಮೀನಿನ ಮೇಲೆ ಬಿಡುಗಡೆ
ಅಟ್ಲಾಂಟ: ಅಮೆರಿಕದ ದಕ್ಷಿಣದ ರಾಜ್ಯ ಜಾರ್ಜಿಯಾದಲ್ಲಿ 2020ರ ಚುನಾವಣೆಯ ಫಲಿತಾಂಶವನ್ನು ತಿರುಚಲು ಪ್ರಯತ್ನಿಸಿದ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಗುರುವಾರ ಬಂಧಿಸಲಾಗಿದೆ. ಆದರೆ 20 ನಿಮಿಷ ಅಟ್ಲಾಂಟದ ಫುಲ್ಟನ್ ಕೌಂಟಿ ಜೈಲಿನಲ್ಲಿದ್ದ ಟ್ರಂಪ್ ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ವರದಿಯಾಗಿದೆ.
2 ಲಕ್ಷ ಡಾಲರ್ ಬಾಂಡ್ನ ಆಧಾರದಲ್ಲಿ ಟ್ರಂಪ್ಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದ ಬಳಿಕ ಅವರು ವಾಹನಗಳ ಮೆರವಣಿಗೆಯಲ್ಲಿ ವಿಮಾನನಿಲ್ದಾಣಕ್ಕೆ ತೆರಳಿದರು. ಮಗ್ಶಾಟ್(ಬಂಧಿಸಲ್ಪಟ್ಟ ಅಪರಾಧಿಗಳ ಫೋಟೋವನ್ನು ಠಾಣೆ ಅಥವಾ ಜೈಲಿನಲ್ಲಿ ತೆಗೆಯುವುದು) ಸಂದರ್ಭ ಸೂಟ್ ಮತ್ತು ಕೆಂಪು ಟೈ ಧರಿಸಿ ಕೋಪದಿಂದ ಫೋಸ್ ಕೊಟ್ಟ ಟ್ರಂಪ್ ಅವರ ಫೋಟೋವನ್ನು ನ್ಯಾಯಾಧಿಕಾರಿಯ ಕಚೇರಿ ಬಿಡುಗಡೆಗೊಳಿಸಿದೆ. ಬಳಿಕ ಮಗ್ಶಾಟ್ ಅನ್ನು ತನ್ನದೇ ಸಾಮಾಜಿಕ ಮಾಧ್ಯಮ ವೇದಿಕೆ `ಟ್ರುಥ್'ನಲ್ಲಿ ಪೋಸ್ಟ್ ಮಾಡಿದ ಟ್ರಂಪ್ `ಚುನಾವಣಾ ಹಸ್ತಕ್ಷೇಪ' ಎಂಬ ಕ್ಯಾಪ್ಷನ್ ನೀಡಿದ್ದಾರೆ.
ಬಂಧನದ ಬಳಿಕ ವರದಿಗಾರರ ಜತೆ ಮಾತನಾಡಿದ ಟ್ರಂಪ್ `ಇದು ಅಮೆರಿಕಕ್ಕೆ ಅತ್ಯಂತ ದುಃಖದ ದಿನವಾಗಿದೆ. ನಾನೇನೂ ತಪ್ಪು ಮಾಡಿಲ್ಲ. ಇಲ್ಲಿ ನಡೆದಿರುವುದು ನ್ಯಾಯದ ಅಣಕವಾಗಿದೆ' ಎಂದು ಹೇಳಿದರು. ಫುಲ್ಟನ್ ಜೈಲಿನಲ್ಲಿ ಟ್ರಂಪ್ಗೆ `ಪಿಒ1135809' ಎಂಬ ಕೈದಿಸಂಖ್ಯೆ ನೀಡಲಾಯಿತು.
ಎಪ್ರಿಲ್ ಬಳಿಕ ಟ್ರಂಪ್ ವಿರುದ್ಧ ನಾಲ್ಕನೇ ಬಾರಿ ಕ್ರಿಮಿನಲ್ ಆರೋಪ ಹೊರಿಸಲಾಗಿದೆ. ಅಶ್ಲೀಲಚಿತ್ರಗಳ ನಟಿ ಜತೆಗಿನ ಸಂಬಂಧ ರಹಸ್ಯವಾಗಿರಿಸುವ ಉದ್ದೇಶದಿಂದ ಹಣ ಪಾವತಿಸಿದ ಆರೋಪದಲ್ಲಿ ನ್ಯೂಯಾರ್ಕ್ ನ್ಯಾಯಾಲಯದಲ್ಲಿ, ಸರಕಾರದ ಉನ್ನತ ರಹಸ್ಯ ದಾಖಲೆಗಳನ್ನು ತನ್ನ ಮನೆಯಲ್ಲಿ ಇರಿಸಿಕೊಂಡ ಪ್ರಕರಣದಲ್ಲಿ ಫ್ಲೋರಿಡಾ ನ್ಯಾಯಾಲಯದಲ್ಲಿ, 2020ರ ಚುನಾವಣೆಯಲ್ಲಿ ಜೋ ಬೈಡನ್ ಎದುರು ಸೋತ ಬಳಿಕ ಫಲಿತಾಂಶವನ್ನು ತಿರುಚಲು ಪ್ರಯತ್ನಿಸಿದ ಪ್ರಕರಣದಲ್ಲಿ ವಾಷಿಂಗ್ಟನ್ ನ್ಯಾಯಾಲಯದಲ್ಲಿ `ಮಗ್ಶಾಟ್' ತೆಗೆಸಿಕೊಳ್ಳುವುದನ್ನು ಟ್ರಂಪ್ ತಪ್ಪಿಸಿಕೊಂಡಿದ್ದರು. ಆದರೆ ಈ ಬಾರಿ ಇದು ಸಾಧ್ಯವಾಗಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟ್ರಂಪ್ ಹಾಗೂ ಇತರ 18 ಪ್ರತಿವಾದಿಗಳ ಶರಣಾಗತಿಗೆ ಫುಲ್ಟನ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಶುಕ್ರವಾರದ ಅಪರಾಹ್ನದವರೆಗೆ ಗಡುವು ವಿಧಿಸಿದ್ದು ಗುರುವಾರದವರೆಗೆ ಟ್ರಂಪ್ ಹಾಗೂ ಇತರ 11 ಪ್ರತಿವಾದಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.