ಮಾನವ ಕಳ್ಳ ಸಾಗಾಣಿಕೆ ಶಂಕೆ: ಭಾರತೀಯರಿದ್ದ ವಿಮಾನಕ್ಕೆ ಫ್ರಾನ್ಸ್ ತಡೆ
Photo: twitter.com/thetribunechd
ಹೊಸದಿಲ್ಲಿ: ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ 300ಕ್ಕೂ ಹೆಚ್ಚು ಮಂದಿ ಭಾರತೀಯರಿದ್ದ ನಿಕರಾಗುವಕ್ಕೆ ಹೋಗುತ್ತಿದ್ದ ವಿಮಾನವನ್ನು ಫ್ರಾನ್ಸ್ ತಡೆದಿದೆ.
ರೊಮಾನಿಯಾದ ಲೆಜೆಂಡ್ ಏರ್ ಲೈನ್ಸ್ ಕಂಪನಿಗೆ ಸೇರಿದ ಎ340 ವಿಮಾನವನ್ನು ವೆಟ್ರಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ವಿಮಾನದಲ್ಲಿ 303 ಭಾರತೀಯರು ಇದ್ದರು ಎಂದು ತಿಳಿದು ಬಂದಿದೆ.
ಅನಾಮಧೇಯ ಸುಳಿವನ್ನು ಆಧರಿಸಿ, ಮಾನವ ಕಳ್ಳಸಾಗಣೆಯ ಶಂಕೆಯಲ್ಲಿ ಸಂತ್ರಸ್ತರನ್ನು ವಿಮಾನ ವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ಯಾರೀಸ್ ಸಾರ್ವಜನಿಕ ಅಭಿಯೋಜಕರು ಪ್ರಕಟಿಸಿದ್ದಾರೆ. ಈ ವಿಮಾನ ಯುಎಇ ಯಿಂದ ತೆರಳುತ್ತಿತ್ತು.
ಈ ಮಧ್ಯೆ ಫ್ರಾನ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿಕೆ ನೀಡಿ, ಶಂಕಿತ ಆರೋಪಿಗಳಿಗೆ ವಕೀಲರನ್ನು ನಿಯೋಜಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಫ್ರಾನ್ಸ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಪರಿಸ್ಥಿತಿ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಬಹುತೇಕ ಭಾರತೀಯ ಮೂಲದ ಪ್ರಯಾಣಿಕರನ್ನು ಹೊಂದಿದ್ದ ಡಬ್ಲ್ಯು/3030 ವಿಮಾನ ದುಬೈನಿಂದ ನಿಕರಾಗುವಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಫ್ರಾನ್ಸ್ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಫ್ರಾನ್ಸ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ನಿಲುಗಡೆ ನೀಡಿ ವಶಕ್ಕೆ ಪಡೆಯಲಾಗಿದೆ. ಭಾರತೀಯ ರಾಯಭಾರ ಕಚೇರಿ ತಂಡ ಆಗಮಿಸಿ, ವಕೀಲರ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಎಲ್ಲ ಪ್ರಯಾಣಿಕರ ಯೋಗಕ್ಷೇಮವನ್ನು ಖಾತರಿಪಡಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಫ್ರಾನ್ಸ್ ನ ಸಂಘಟಿತ ಅಪರಾಧ ತಡೆ ಘಟಕ ಜೆಯುಎನ್ಎಎಲ್ ಸಿಓ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಭಿಯೋಜಕರು ಸ್ಪಷ್ಟಪಡಿಸಿದ್ದಾರೆ.