ಆಫ್ರಿಕಾದ ಬಡ ದೇಶಗಳಿಗೆ ಉಚಿತ ಆಹಾರಧಾನ್ಯ: ಪುಟಿನ್ ಘೋಷಣೆ
ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ & ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Photo:PTI)
ಮಾಸ್ಕೊ: ಕಪ್ಪು ಸಮುದ್ರ ಆಹಾರಧಾನ್ಯ ಒಪ್ಪಂದದಿಂದ ಹಿಂದೆ ಸರಿದ ಬೆನ್ನಲ್ಲೇ , 6 ಬಡ ಆಫ್ರಿಕಾ ದೇಶಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಘೋಷಿಸಿದ್ದಾರೆ.
ಸೈಂಟ್ ಪೀಟರ್ಸ್ಬರ್ಗ್ನಲ್ಲಿ ರಶ್ಯದ ನೇತೃತ್ವದಲ್ಲಿ ನಡೆಯುತ್ತಿರುವ ರಶ್ಯ-ಆಫ್ರಿಕಾ ಶೃಂಗಸಭೆಯಲ್ಲಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಸೇರಿದಂತೆ 17 ಆಫ್ರಿಕನ್ ಮುಖಂಡರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಭೆಯ ಆರಂಭದಲ್ಲಿ ಮಾತನಾಡಿದ ಪುಟಿನ್ “ಮುಂಬರುವ ತಿಂಗಳುಗಳಲ್ಲಿ ಸುಮಾರು 50,000 ಟನ್ಗಳಷ್ಟು ಆಹಾರಧಾನ್ಯಗಳನ್ನು ಬುರ್ಕಿನಾ ಫಾಸೊ, ಜಿಂಬಾಬ್ವೆ, ಮಾಲಿ, ಸೊಮಾಲಿಯಾ, ಸೆಂಟ್ರಲ್ ಆಫ್ರಿಕನ್ ಗಣರಾಜ್ಯ ಮತ್ತು ಎರಿಟ್ರಿಯಾ ದೇಶಗಳಿಗೆ ಉಚಿತವಾಗಿ ಒದಗಿಸಲಾಗುವುದು” ಎಂದರು.
ಈ ಶೃಂಗಸಭೆಯಲ್ಲಿ ಆಫ್ರಿಕಾದ ದೇಶಗಳು ಪಾಲ್ಗೊಳ್ಳುವುದನ್ನು ತಡೆಯಲು ಪಾಶ್ಚಿಮಾತ್ಯ ದೇಶಗಳು ನಿರಂತರ ಒತ್ತಡ ತಂತ್ರಗಳನ್ನು ಬಳಸಿದೆ ಎಂದು ರಶ್ಯ ಆರೋಪಿಸಿದೆ.
ಉಕ್ರೇನ್ ಸಂಘರ್ಷ ಆರಂಭವಾದಂದಿನಿಂದ ಆಫ್ರಿಕಾ ದೇಶಗಳೊಂದಿಗೆ ರಾಜತಾಂತ್ರಿಕ ಮತ್ತು ಭದ್ರತಾ ಸಂಬಂಧಗಳನ್ನು ಬಲಗೊಳಿಸಲು ರಶ್ಯ ಪ್ರಯತ್ನಿಸುತ್ತಿದೆ.