ಮಾಲ್ದೀವ್ಸ್ ಗೆ ಚೀನಾದಿಂದ ಉಚಿತ ಮಿಲಿಟರಿ ನೆರವು
Photo:NDTV
ಮಾಲೆ : ಭಾರತದೊಂದಿಗಿನ ರಾಜತಾಂತ್ರಿಕ ವಿವಾದದ ನಡುವೆ, ಮಾಲ್ದೀವ್ಸ್ ಚೀನಾದಿಂದ ಉಚಿತ ಮಿಲಿಟರಿ ನೆರವು ಪಡೆಯಲಿದೆ. ಚೀನಾ ಸೋಮವಾರ ಮಾಲ್ದೀವ್ಸ್ ಜತೆ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಉಚಿತ ಮಿಲಿಟರಿ ನೆರವು ಒದಗಿಸುವುದಾಗಿ ಘೋಷಿಸಿದೆ.
ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚಿಸಲು ಮಾಲ್ದೀವ್ಸ್ ನ ರಕ್ಷಣಾ ಸಚಿವ ಮುಹಮ್ಮದ್ ಘಸನ್ ಮೌಮೂನ್ ಚೀನಾದ ಅಂತರಾಷ್ಟ್ರೀಯ ರಕ್ಷಣಾ ಸಹಕಾರ ವಿಭಾಗದ ಸಹಾಯಕ ನಿರ್ದೇಶಕ ಮೇಜರ್ ಜನರಲ್ ಝಾಂಗ್ ಬವೋಕುನ್ರನ್ನು ಭೇಟಿಯಾಗಿದ್ದರು. ಮಾಲ್ದೀವ್ಸ್ ನಲ್ಲಿರುವ ಭಾರತದ ಸೇನಾ ಸಿಬಂದಿಗಳನ್ನು ವಾಪಾಸು ಕಳುಹಿಸಲು ಮಾಲ್ದೀವ್ಸ್ ಅಧ್ಯಕ್ಷ ಮುಹಮದ್ ಮುಯಿಝ್ಝು ಗಡುವು ವಿಧಿಸಿದ ಬಳಿಕ ಈ ಭೇಟಿ ನಡೆದಿದೆ. ಈ ಸಂದರ್ಭ ಮಾಲ್ದೀವ್ಸ್ ಗೆ ಉಚಿತ ಮಿಲಿಟರಿ ನೆರವು, 12 ಪರಿಸರ ಸ್ನೇಹಿ ಆಂಬ್ಯುಲೆನ್ಸ್ ಗಳನ್ನು ಉಚಿತವಾಗಿ ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮಾಲ್ದೀವ್ಸ್ ನ ಮಾಧ್ಯಮಗಳು ವರದಿ ಮಾಡಿವೆ.
ಮಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಮಾಲ್ದೀವ್ಸ್ ಗೆ ಚೀನಾದ ರಾಯಭಾರಿ ವಾಂಗ್ ಲಿಕ್ಸಿನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.