VIDEO- ದೇಶ ಹೊತ್ತಿ ಉರಿಯುತ್ತಿದ್ದರೂ ಸಂಗೀತ ಕಚೇರಿಗೆ ಹಾಜರಾದ ಫ್ರಾನ್ಸ್ ಅಧ್ಯಕ್ಷ: ವ್ಯಾಪಕ ಟೀಕೆ
Photo: PTI
ಪ್ಯಾರಿಸ್: ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಸಂಗೀತ ಕಚೇರಿಯಲ್ಲಿ ಹಾಜರಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ, ಟೀಕೆ ವ್ಯಕ್ತವಾಗಿದೆ.
ಮಂಗಳವಾರ ರಾತ್ರಿ ಪ್ಯಾರಿಸ್ ಹೊರವಲಯದ ನ್ಯಾಂಟೆರ್ ನಗರದಲ್ಲಿ ನೇಲ್ ಎಂ. ಎಂಬ ಯುವಕ ಪೊಲೀಸರ ಗುಂಡೇಟಿಗೆ ಬಲಿಯಾದ ಬಳಿಕ ಫ್ರಾನ್ಸ್ ನಾದ್ಯಂತ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿದ್ದು ಓರ್ವ ಮೃತಪಟ್ಟಿದ್ದಾನೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ಪ್ರತಿಭಟನೆ ನಿಯಂತ್ರಿಸಲು ಭದ್ರತಾ ಪಡೆ ಹರಸಾಹಸ ಪಡುತ್ತಿದೆ.
ಆದರೆ ದೇಶದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಅಧ್ಯಕ್ಷ ಮ್ಯಾಕ್ರೋನ್ ಪತ್ನಿಯೊಂದಿಗೆ ಪ್ಯಾರಿಸ್ ನಲ್ಲಿ ನಡೆದ ಬ್ರಿಟನ್ ನ ಗಾಯಕ ಎಲ್ಟನ್ ಜಾನ್ ಅವರ ಸಂಗೀತ ಕಚೇರಿಯಲ್ಲಿ ಉಪಸ್ಥಿತರಿರುವ ವೀಡಿಯೊ ವೈರಲ್ ಆಗಿದೆ. ಪ್ರತಿಭಟನಾಕಾರರು ಫ್ರಾನ್ಸ್ ನ ನಗರಗಳನ್ನು ಸುಡುತ್ತಿರುವಾಗ ಮ್ಯಾಕ್ರೋನ್ ಪ್ಯಾರಿಸ್ ನಲ್ಲಿ ಸಂಗೀತ ಕಚೇರಿಯಲ್ಲಿ ಖುಷಿಯಿಂದ ಇದ್ದರು. ತನ್ನ ಪತ್ನಿಯೊಂದಿಗೆ ಸಂಗೀತ ಕಾರ್ಯಕ್ರಮಕ್ಕೆ ಹಾಜರಾದರಲ್ಲದೆ ಕೆಲಕ್ಷಣ ನೃತ್ಯವನ್ನೂ ಮಾಡಿದ್ದಾರೆ ಎಂದು ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಸಂಗೀತ ಕಚೇರಿಗೆ ಫ್ರಾನ್ಸ್ ಅಧ್ಯಕ್ಷರು ಆಗಮಿಸಿರುವ ವೀಡಿಯೊವನ್ನು ಗಾಯಕ ಎಲ್ಟನ್ ಜಾನ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.