ಸಂಘರ್ಷ ಪೀಡಿತ ಯುದ್ಧ ಭೂಮಿ, ಸಿರಿಯಾದಂತಹ ವಿಪತ್ತು ವಲಯಗಳಲ್ಲಿ ಜೀವನಾಡಿಯಾಗಿರುವ ವಾಟ್ಸಾಪ್: ವರದಿ
PC : scroll.in
ಹೊಸದಿಲ್ಲಿ : ಸಿರಿಯಾ ಯುದ್ಧದಿಂದ ಹಾನಿಗೊಳಗಾದ ವಾಯುವ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವ ಸ್ವಯಂಸೇವಕ ಸಂಸ್ಥೆಯಾದ ವೈಟ್ ಹೆಲ್ಮೆಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಿದಾ ಮಕ್ಸೂರ್, ಫೆಬ್ರವರಿ 6, 2023 ರ ಮುಂಜಾನೆ ಭೂ ಕಂಪನದ ಅನುಭವಾದಾಗ ಕರ್ತವ್ಯದಲ್ಲಿದ್ದರು. ಸಿರಿಯಾ ಮತ್ತು ಟರ್ಕಿ ನಡುವಿನ ಗಡಿ ಪ್ರದೇಶದಲ್ಲಿ ಅದುವರೆಗೆ ಸಂಭವಿಸಿದ್ಧ ಭೂಕಂಪಗಳಲ್ಲಿ ಅಂದು ಸಂಭವಿಸಿದ್ದ ಕಂಪನ ಹೆಚ್ಚು ತೀವ್ರವಾಗಿತ್ತು. 7.8 ತೀವ್ರತೆಯು ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು.
ಕ್ಷಣಮಾತ್ರದಲ್ಲೇ ಕಾರ್ಯಾಚರಣೆ ಕೊಠಡಿಗೆ ತುರ್ತು ವಾಟ್ಸಾಪ್ ಲೈನ್ಗಳಿಗೆ ಕರೆಗಳು ಬರಲಾರಂಭಿಸಿದವು. "ಅವಶೇಷಗಳ ಅಡಿಯಲ್ಲಿ ಅನೇಕ ಜನರು ಸಿಲುಕಿಕೊಂಡಿದ್ದಾರೆ. ಕುಸಿದ ಕಟ್ಟಡಗಳ ಕೆಳಗೆ ಅನೇಕ ಜನರಿದ್ದಾರೆ" ಎಂದು ಮಕ್ಸೂರ್ ರೆಸ್ಟ್ ಆಫ್ ವರ್ಲ್ಡ್ಗೆ ತಿಳಿಸಿದರು. ಸಿರಿಯಾದಲ್ಲಿ ಭೂಕಂಪ ಮತ್ತು ಅದರ ನಂತರದ ಘಟನೆಗಳಲ್ಲಿ ಅಂದಾಜು 10,000 ಕಟ್ಟಡಗಳು ನಾಶವಾದವು. 5,500 ಕ್ಕೂ ಹೆಚ್ಚು ಜನರು ಮೃತಪಟ್ಟರು.
ಸಿರಿಯಾ ಈಗಾಗಲೇ ಒಂದು ದಶಕಕ್ಕೂ ಹೆಚ್ಚು ಅಂತರ್ಯುದ್ಧಕ್ಕೆ ಸಿಲುಕಿ ನಲುಗಿದೆ. ಆ ಹೊತ್ತಿಗೆ ಸಾಮಾನ್ಯ ತುರ್ತು ಸಂಖ್ಯೆಗಳ ಮೂಲಕ ಸಹಾಯಕ್ಕಾಗಿ ಕರೆ ಮಾಡಲು ಅಲ್ಲಿನ ಜನರಿಗೆ ಸಾಧ್ಯವಾಗಲಿಲ್ಲ. ಬಿಕ್ಕಟ್ಟಿನ ಸಮಯದಲ್ಲಿ, ಅವರು ವೈಟ್ ಹೆಲ್ಮೆಟ್ಗಳು ಸ್ಥಾಪಿಸಿದ ವಾಟ್ಸಾಪ್ ಆಧಾರಿತ ತುರ್ತು ಸಂದೇಶ ರವಾನೆ ವ್ಯವಸ್ಥೆಯನ್ನು ಬಳಸಿದರು.
ವಾಟ್ಸಾಪ್ ಮೂಲಕ ದೊರೆತ ಮಾಹಿತಿಗಳನು ಬಳಿಸಿಕೊಂಡು ಮಕ್ಸೂರ್ ಅವರು ಸಹಾಯ ಯಾಚಿದ ಜನರಿಗೆ ನೆರವಾದರು. ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವ ಆಂಬ್ಯುಲೆನ್ಸ್ಗಳಿಗೆ ಸಂಪರ್ಕ ಸಾಧಿಸಿದರು. ಅವಶೇಷಗಳಡಿಯಲ್ಲಿ ಇನ್ನೂ ಸಿಲುಕಿರುವವರ ಮಾಹಿತಿಗಳ್ನು ರಕ್ಷಣಾ ಸಿಬ್ಬಂದಿಗಳ ನಡುವೆ ಹಂಚಿಕೊಂಡು ಸಂಪರ್ಕಕೊಂಡಿಯಾದರು. ಆ ಮೂಲಕ ಸಂಘರ್ಷ ಪೀಡಿತ ಯುದ್ಧ ಭೂಮಿಗಳು ಮತ್ತು ಸಿರಿಯಾದಂತಹ ವಿಪತ್ತು ವಲಯಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರ ಜೀವನಾಡಿಯಾಗಿದ್ದು, ಜನರ ಪ್ರಾಣ ಉಳಿಸುವಲ್ಲಿ ಮತ್ತು ನೆರವು ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ರೆಸ್ಟ್ ಆಫ್ ವರ್ಲ್ಡ್(Rest of World) ವರದಿಯು ತಿಳಿಸಿದೆ.
200 ಕೋಟಿಗಿಂತಲೂ ಹೆಚ್ಚು ದೈನಂದಿನ ಬಳಕೆದಾರರಿಗೆ ವಾಟ್ಸಾಪ್ ಹೆಚ್ಚು ಜನಪ್ರಿಯವಾಗಿದೆ. ಕಳಪೆ ನೆಟ್ ವರ್ಕ್ ಇರುವ ಪ್ರದೇಶಗಳಲ್ಲಿ ಕೂಡ ವಾಟ್ಸಾಪ್ ಭಾಗಶಃ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ UNRWAಯಂತಹ ನೆರವು ಸಂಸ್ಥೆಗಳು ಮತ್ತು ಎನ್ ಜಿ ಒಗಳು ತುರ್ತು ಸೇವೆಗಳನ್ನು ನೀಡಲು ವಾಟ್ಸಾಪ್ ಗಳನ್ನು ಬಳಸಿದರೆ, ನಿರಾಶ್ರಿತರು ಅದನ್ನು ಜೀವನಾಡಿಯಾಗಿ ಬಳಸುತ್ತಾರೆ ಮತ್ತು ಪತ್ರಕರ್ತರು ಇದನ್ನು ಸಂಘರ್ಷ ವಲಯಗಳಿಂದ ವರದಿ ಮಾಡಲು ಬಳಸುತ್ತಾರೆ.
ವಾಟ್ಸಾಪ್ ಜಾಗತಿಕ ಸಂವಹನ ನಿರ್ದೇಶಕಿ ಕ್ರಿಸ್ಟಿನಾ ಲೋನಿಗ್ರೊ ರೆಸ್ಟ್ ಆಫ್ ವರ್ಲ್ಡ್ ಜೊತೆ ಮಾತನಾಡುತ್ತಾ, ಹೆಚ್ಚು ಪರಿಣಾಮಕಾರಿಯಾಗಿ ನಮ್ಮ ಅಪ್ಲಿಕೇಶನ್ ಅನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಹಲವು ಎನ್ ಜಿ ಒ ಗಳೊಂದಿಗೆ ನಾವು ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಸಂಘರ್ಷ ಮತ್ತು ವಿಪತ್ತು ಪೀಡಿತ ಪ್ರದೇಶಗಳಲ್ಲಿನ ಮಾಹಿತಿಗಳು ಸರಿಯಾಗಿ ರವಾನೆಯಾಗುವುದಿಲ್ಲ. 20ನೇ ಶತಮಾನದಲ್ಲಿ ಸರ್ಕಾರ ಮತ್ತು ನೆರವು ಸಂಸ್ಥೆಗಳು ರೇಡಿಯೋ ಅಥವಾ ದೂರದರ್ಶನಗಳನ್ನು ಮಾಹಿತಿಯ ರವಾನೆಗೆ ಬಳಸುತ್ತಿದ್ದರು. ಕೆಲವೊಮ್ಮೆ ಧ್ವನಿವರ್ಧಕಗಳನ್ನು ಬಳಸಲಾಗುತ್ತಿತ್ತು. 2006ರಲ್ಲಿ ಡೆನ್ಮಾರ್ಕ್ ಮೂಲದ ಲಾಭರಹಿತ ಸಂಸ್ಥೆ ʼಇಂಟರ್ ನ್ಯಾಷನಲ್ ಮೀಡಿಯಾ ಸಪೋರ್ಟ್ʼ ವರದಿಯು ರೇಡಿಯೊ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಗೆ ಸಂವಹನದ ಪ್ರಮುಖ ಸಾಧನ ಎಂದು ವಿವರಿಸಿದೆ. 2006ರ ನಂತರ ಇಂಡೋನೇಷ್ಯಾ ಮತ್ತು 2009ರಲ್ಲಿ ಸುಡಾನ್ ನಲ್ಲಿ ನೆರವು ಕಾರ್ಯಾಚರಣೆಯ ಭಾಗವಾಗಿ ರೇಡಿಯೊ ಸೆಟ್ ಗಳನ್ನು ಕೂಡ ವಿತರಿಸಲಾಗಿತ್ತು.
2000ದ ದಶಕದ ಆರಂಭದ ವೇಳೆಗೆ ಡಿಜಿಟಲ್ ಮಾಧ್ಯಮಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲು ಪ್ರಾರಂಭಿಸಿದವು. 2003ರಲ್ಲಿ ಪ್ರಾರಂಭವಾದ ಸ್ಕೈಪ್ ಸಂಘರ್ಷದ ಆರಂಭಿಕ ದಿನಗಳಲ್ಲಿ ಸಿರಿಯಾದಲ್ಲಿ ಮಹತ್ವದ ಪಾತ್ರ ವಹಿಸಿದ್ದವು. 2009ರಲ್ಲಿ ವಾಟ್ಸಾಪ್ ಪ್ರಾರಂಭವಾಯಿತು. ನಂತರ 2010ರಲ್ಲಿ ವೈಬರ್ (Viber) ಮತ್ತು 2013ರಲ್ಲಿ ಟೆಲಿಗ್ರಾಮ್ ಪ್ರಾರಂಭವಾಯಿತು. ಈ ಅಪ್ಲಿಕೇಶನ್ ಗಳು SMS ಕಳುಹಿಸುವ ಅಥವಾ ಫೋನ್ ಕರೆ ಮಾಡುವಷ್ಟು ಸರಳವಾದ ವೈಶಿಷ್ಟ್ಯಗಳನ್ನು ಹೊಂದಿದೆ.
ಸಿರಿಯಾದ ಕಮಿಶ್ಲಿ ನಗರದ ನೆರವು ಕಾರ್ಯಕರ್ತ ಶೆರ್ಗೋ ಅಲಿ ಸುಮಾರು ಎಂಟು ವರ್ಷಗಳನ್ನು ತನ್ನ ತಾಯ್ನಾಡಿನ ಈಶಾನ್ಯ ಪ್ರದೇಶದಲ್ಲಿ ಹಾಗೂ ಇರಾಕ್ ನ ಸಿಂಜಾರ್ ಮತ್ತು ಮೊಸುಲ್ ಪ್ರದೇಶಗಳಲ್ಲಿ ಕಳೆದರು. ಆ ಸಮಯದಲ್ಲಿ 2015, 2016, 2017ರಲ್ಲಿ ಹೆಚ್ಚಾಗಿ ಸ್ಕೈಪ್ ಮತ್ತು SMS ಸಂದೇಶಗಳನ್ನು ಬಳಸುತ್ತಿದ್ದರು ಎಂದು ರೆಸ್ಟ್ ಆಫ್ ವರ್ಲ್ಡ್ (Rest of World)ಗೆ ತಿಳಿಸಿದ್ದಾರೆ.
2010ರಲ್ಲಿ ಎನ್ ಜಿ ಒ ಗಳಿಗೆ ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿ ಸಂವಹನ ಸಾಧನವಾಗಿದೆ ಎಂದು ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ಹೈ ಕಮಿಷನರ್ ಕಚೇರಿಯ ಹಿರಿಯ ಅಧಿಕಾರಿ ಜಾನ್ ವಾರ್ನ್ಸ್ ರೆಸ್ಟ್ ಆಫ್ ವರ್ಲ್ಡ್ಗೆ ತಿಳಿಸಿದ್ದಾರೆ. UNHCR ಹಲವಾರು ವರ್ಷಗಳಿಂದ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಾಶ್ರಿತರ ಸಂಪರ್ಕದಲ್ಲಿದೆ. ಮೆಕ್ಸಿಕೋದಲ್ಲಿ ನಿರಾಶ್ರಿತರು ಮತ್ತು ವಲಸಿಗರೊಂದಿಗೆ ಮಾತನಾಡಲು UNHCR ಸಿಬ್ಬಂದಿಗಳು ವಾಟ್ಸಾಪ್ ಮಾತ್ರವಲ್ಲದೆ ಫೇಸ್ ಬುಕ್ ಮೆಸೆಂಜರ್ ಅನ್ನು ಕೂಡ ಬಳಸುತ್ತಿದ್ದರು ಎಂದು ಜಾನ್ ವಾರ್ನ್ಸ್ ಹೇಳಿದ್ದಾರೆ.
ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಫೆಲೆಸ್ತೀನ್ ಗಾಝಾದಲ್ಲಿರುವ ತನ್ನ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಲು ಫೋನ್ ಕರೆಗಳು, ಇಮೇಲ್ ಗಳನ್ನು ಬಳಸುತ್ತಿದ್ದರು ಎಂದು UNRWA ಸಂವಹನ ನಿರ್ದೇಶಕಿ ಜೂಲಿಯೆಟ್ ಟೌಮಾ ರೆಸ್ಟ್ ಆಫ್ ವರ್ಲ್ಡ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
2023ರ ಅ.7ರಂದು ಇಸ್ರೇಲ್ ಗಾಝಾ ಮೇಲೆ ಯುದ್ಧ ಘೋಷಿಸಿ ದಾಳಿಯನ್ನು ಆರಂಭಿಸಿದ ಬಳಿಕ ಗಾಝಾದಲ್ಲಿ 44,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕಟ್ಟಡಗಳು ಧ್ವಂಸಗೊಂಡಿದೆ. ಟವರ್ ಗಳು, ವಿದ್ಯುತ್, ಇಂಟರ್ ನೆಟ್ ಸೇರಿದಂತೆ ಮೂಲ ಸೌಕರ್ಯದ ಮೇಲೂ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಇದರಿಂದಾಗಿ ಗಾಝಾದಲ್ಲಿ ಜನರು ಪರಸ್ಪರ ಸಂಪರ್ಕ, ಮಾತುಕತೆಗೆ ಸಾಧ್ಯವಾಗಿಲ್ಲ. ನಾವು ಸ್ಯಾಟ್ ಲೈಟ್ ಪೋನ್ ಗಳ ಮೂಲಕ ಜನರನ್ನು ಸಂಪರ್ಕಿಸುತ್ತಿದ್ದೆವು ಎಂದು ಜೂಲಿಯೆಟ್ ಟೌಮಾ ಹೇಳಿದ್ದಾರೆ.
UNRWA ಸಂಸ್ಥೆ ಶಾಲಾ ಕಾರ್ಯಕ್ರಮಗಳು ಅಥವಾ ಲಸಿಕೆ ಅಭಿಯಾನದ ಮಾಹಿತಿಯಂತಹ ವಿಷಯಗಳ ಕುರಿತು ಮಾಹಿತಿಯನ್ನು ನೀಡಿಲು ಈ ಹಿಂದೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿತ್ತು. ಆದರೆ ಈಗ ʼವಾಟ್ಸಾಪ್ ಜೀವ ಉಳಿಸಬಲ್ಲದು ಎಂದು ನಾನು ಹೇಳಿದರೆ ಉತ್ಪ್ರೇಕ್ಷೆಯಾಗುವುದಿಲ್ಲʼ ಎಂದು ಟೌಮಾ ಹೇಳಿದ್ದಾರೆ. UNRWA ಗಾಝಾದಲ್ಲಿ ಸಿಬ್ಬಂದಿಯೊಂದಿಗೆ ಮಾತನಾಡಲು ಈಗ ಸಂಪೂರ್ಣವಾಗಿ ವಾಟ್ಸಾಪ್ ನ್ನು ಅವಲಂಬಿಸಿಕೊಂಡಿದೆ ಎಂದು ಟೌಮಾ ಹೇಳಿದ್ದಾರೆ.
ಸೌಜನ್ಯ: scroll.in