ಸುಡಾನ್ ನಲ್ಲಿ ಪೂರ್ಣಪ್ರಮಾಣದ ಅಂತರ್ಯುದ್ಧದ ಸಾಧ್ಯತೆ: ವಿಶ್ವಸಂಸ್ಥೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ \ Photo: PTI
ಖಾರ್ಟಮ್: ಸಂಘರ್ಷದಿಂದ ಜರ್ಝರಿತಗೊಂಡಿರುವ ಸುಡಾನ್ ಇದೀಗ ಪೂರ್ಣಪ್ರಮಾಣದ ಅಂತರ್ಯುದ್ಧದ ಅಂಚಿನಲ್ಲಿದ್ದು ಇದು ಇಡೀ ವಲಯವನ್ನೇ ಅಸ್ಥಿರಗೊಳಿಸಬಹುದು ಎಂದು ವಿಶ್ವಸಂಸ್ಥೆ ರವಿವಾರ ಎಚ್ಚರಿಕೆ ನೀಡಿದೆ.
ರವಿವಾರ ಕನಿಷ್ಟ 22 ಮಂದಿಯ ಸಾವಿಗೆ ಕಾರಣವಾದ ಆಮ್ಡರ್ಮನ್ ನಗರದ ಮೇಲಿನ ವೈಮಾನಿಕ ದಾಳಿಯನ್ನು ಖಂಡಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಸುಡಾನ್ನಲ್ಲಿ ಮಾನವೀಯತೆ ಮತ್ತು ಮಾನವ ಹಕ್ಕು ಕಾಯ್ದೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದ್ದು ಅಲ್ಲಿ ಅಪಾಯಕಾರಿ ಮತ್ತು ಗೊಂದಲದ ಪರಿಸ್ಥಿತಿಯಿದೆ. ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಯ ನಡುವೆ ಇದೀಗ ನಡೆಯುತ್ತಿರುವ ಯುದ್ಧವು ಪೂರ್ಣ ಪ್ರಮಾಣದ ಅಂತರ್ಯುದ್ಧವಾಗಿ ಸ್ಫೋಟಗೊಳ್ಳುವ ಎಲ್ಲಾ ಸಾಧ್ಯತೆಯಿದ್ದು ಇದು ಸಂಪೂರ್ಣ ವಲಯವನ್ನು ಅಸ್ಥಿರಗೊಳಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸುಮಾರು 3 ತಿಂಗಳಿಂದ ಮುಂದುವರಿದಿರುವ ಸಂಘರ್ಷದಲ್ಲಿ ಸುಮಾರು 3 ಸಾವಿರ ಮಂದಿ ಹತರಾಗಿದ್ದು ದೌರ್ಜನ್ಯ, ಅತ್ಯಾಚಾರ ಮತ್ತು ಜನಾಂಗೀಯ ಉದ್ದೇಶಿತ ಹತ್ಯೆಗಳು ಹೆಚ್ಚಿವೆ ಎಂದು ವರದಿಯಾಗಿದೆ. ದರ್ಫುರ್ ವಲಯದಲ್ಲಿ ವ್ಯಾಪಕ ಗಲಭೆ, ಲೂಟಿ ಮುಂದುವರಿದಿದ್ದು ಮನುಕುಲದ ವಿರುದ್ಧದ ಅಪರಾಧ ಭುಗಿಲೇಳುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಯುದ್ಧ ಆರಂಭವಾದಂದಿನಿಂದ ಅರೆಸೇನಾ ಪಡೆಯು ಜನವಸತಿ ಪ್ರದೇಶಗಳಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿ, ಅಲ್ಲಿನ ನಿವಾಸಿಗಳನ್ನು ಬಲವಂತದಿಂದ ಒಕ್ಕಲೆಬ್ಬಿಸುತ್ತಿದೆ ಎಂಬ ಆರೋಪವಿದೆ. ಸುಡಾನ್ ಯುದ್ಧದಿಂದ ಸುಮಾರು 3 ದಶಲಕ್ಷ ಜನತೆ ನೆಲೆಕಳೆದುಕೊಂಡಿದ್ದು ಇವರಲ್ಲಿ ಸುಮಾರು 7 ಲಕ್ಷ ಜನರು ನೆರೆದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ವಲಸಿಗರಿಗಾಗಿನ ಅಂತರಾಷ್ಟ್ರೀಯ ಸಂಘಟನೆ ವರದಿ ಮಾಡಿದೆ. ಪಶ್ಚಿಮ ದರ್ಫುರ್ ವಲಯದಲ್ಲಿ ಅರೆಸೇನಾ ಪಡೆ ಹಾಗೂ ಅದನ್ನು ಬೆಂಬಲಿಸುತ್ತಿರುವ ಸಶಸ್ತ್ರ ಹೋರಾಟಗಾರರ ತಂಡದಿಂದ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆಯಾಗುತ್ತಿದೆ. ಇಲ್ಲಿ ಸಂಘರ್ಷವು ಜನಾಂಗೀಯ ಆಯಾಮ ಪಡೆಯುವ ಲಕ್ಷಣಗಳಿವೆ ಎಂದು ವಿಶ್ವಸಂಸ್ಥೆ, ಆಫ್ರಿಕನ್ ದೇಶಗಳ ಸಂಘಟನೆ ಎಚ್ಚರಿಕೆ ನೀಡಿವೆ.
ಈ ಮಧ್ಯೆ, ಸುಡಾನ್ ಸಂಘರ್ಷಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಇಥಿಯೋಪಿಯಾ, ಕೆನ್ಯಾ, ಸೊಮಾಲಿಯಾ ಮತ್ತು ದಕ್ಷಿಣ ಸುಡಾನ್ನ ಮುಖಂಡರು ಇಥಿಯೋಪಿಯಾ ರಾಜಧಾನಿಯಲ್ಲಿ ಸೋಮವಾರ (ಜು.10) ಸಭೆ ಸೇರಿ ಚರ್ಚಿಸಲಿದ್ದಾರೆ. ಈ ಸಭೆಗೆ ವಿಶ್ವಸಂಸ್ಥೆ ಬೆಂಬಲ ಘೋಷಿಸಿದೆ. ಸುಡಾನ್ ಸೇನೆಯ ಅಬ್ದುಲ್ ಫತಾಹ್ ಅಲ್ಬರ್ಹಾನ್ ಮತ್ತು ಅರೆ ಸೇನಾಪಡೆಯ ಕಮಾಂಡರ್ ಮುಹಮ್ಮದ್ ಹಮ್ದನ್ ಡಗ್ಲೋರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಸುಡಾನ್ನಲ್ಲಿ ಅತ್ಯಂತ ಭೀತಿಯ ವಾತಾವರಣವಿದ್ದು ದೇಶದಾದ್ಯಂತ ವ್ಯಾಪಕ ಅಪರಾಧ ಪ್ರಕರಣ ನಡೆಯುತ್ತಿದೆ. ಭದ್ರತೆ ಒದಗಿಸಬೇಕಾದ ಸೇನಾಪಡೆಯ 2 ವಿಭಾಗಗಳ ನಡುವೆ ಸಂಘರ್ಷ ನಡೆಯುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರ ಮತ್ತು ತುರ್ತು ಪರಿಹಾರ ಸಂಯೋಜಕ ಮಾರ್ಟಿನ್ ಗ್ರಿಫಿತ್ ಕಳವಳ ವ್ಯಕ್ತಪಡಿಸಿದ್ದಾರೆ.