ದಕ್ಷಿಣ ಆಫ್ರಿಕಾದಲ್ಲಿ ವಿಷಾನಿಲ ಸೋರಿಕೆ: 16 ಮಂದಿ ಮೃತ್ಯು
ಫೋಟೋ: Reuters
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಬುಧವಾರ ನಡೆದ ವಿಷಾನಿಲ ಸೋರಿಕೆ ದುರಂತದಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಮೃತರ ಸಂಖ್ಯೆ 24 ಎಂದು ತುರ್ತು ಸೇವೆಗಳ ವಿಭಾಗ ಪ್ರಕಟಿಸಿದೆ.
ಸಾವಿನ ಸಂಖ್ಯೆಯಲ್ಲಿ ಈ ವ್ಯತ್ಯಾಸ ಏಕೆ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಶೋಧ ಮತ್ತು ಪರಿಹಾರ ತಂಡಗಳು ಇನ್ನೂ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಸಾವಿನ ಸಂಖ್ಯೆಯನ್ನು ನಿಖರವಾಗಿ ಪತ್ತೆ ಮಾಡುವ ಕಾರ್ಯ ಮುಂದುವರಿದಿದೆ
ಜೊಹಾನ್ಸ್ಬರ್ಗ್ನ ಪೂರ್ವ ಹೊರವಲಯದ ಬಾಕ್ಸ್ಬರ್ಗ್ನ ಅನಧಿಕೃತ ವಸಾಹತುವಿನಲ್ಲಿ ಈ ದುರಂತ ನಡೆದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಘಟನೆಯಲ್ಲಿ ಒಂದು ವರ್ಷ, ಆರು ವರ್ಷ ಹಾಗೂ 15 ವರ್ಷದ ಮೂವರು ಮಕ್ಕಳು ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಇದೇ ಪ್ರದೇಶದಲ್ಲಿ ಕ್ರಿಸ್ಮಸ್ ಹಬ್ಬದ ಮುನ್ನಾದಿನ ಅನಿಲ ಸಾಗಿಸುತ್ತಿದ ಟ್ರಕ್ ಸೇತುವೆಯ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಸ್ಫೋಟವಾದ ಘಟನೆಯಲ್ಲಿ 41 ಮಂದಿ ಮೃತಪಟ್ಟಿದ್ದರು.
ಆಂಜೆಲೊ ಅನಧಿಕೃತ ವಸಾಹತುವಿನ ಗುಡಿಸಲಿನಲ್ಲಿ ಇಟ್ಟುಕೊಂಡಿದ್ದ ಅನಿಲ ಸಿಲಿಂಡರ್ನಿಂದ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ. 100 ಮೀಟರ್ ಸುತ್ತಮುತ್ತ ಶೋಧ ಹಾಗೂ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ತುರ್ತು ಸೇವೆಗಳ ವಿಭಾಗದ ವಕ್ತಾರ ವಿಲಿಯಂ ತ್ಲಾದಿ ಹೇಳಿದ್ದಾರೆ.
ಇಡೀ ಪ್ರದೇಶದ ಸುತ್ತಮುತ್ತಲು ಇನ್ನೂ ಮೃತದೇಹಗಳು ಬಿದ್ದಿವೆ ಎಂದು ಅವರು ಹೇಳಿದ್ದು, ವಿಧಿವಿಜ್ಞಾನ ತಜ್ಞರು ಮತ್ತು ಪೆಥಾಲಜಿ ತಜ್ಞರು ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದಾರೆ ಎಂದು ಅವರು ವಿವರ ನೀಡಿದ್ದಾರೆ. ಅನಧಿಕೃತವಾಗಿ ಅಕ್ರಮ ಗಣಿಗಾರಿಕೆ ಮಾಡುವವರು ಗುಡಿಸಲುಗಳಲ್ಲಿ ಚಿನ್ನ ಶುದ್ಧೀಕರಿಸುವ ಸಲುವಾಗಿ ಈ ಅನಿಲ ಸಿಲಿಂಡರ್ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.