ಗಾಝಾ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ 13 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ | Photo: NDTV
ಗಾಝಾ ನಗರ: ಗಾಝಾ ಪಟ್ಟಿಯಾದ್ಯಂತ ಮಂಗಳವಾರ ರಾತ್ರಿಯಿಂದ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ 13 ಮಂದಿ ಮೃತಪಟ್ಟಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಬುಧವಾರ ಹೇಳಿದೆ.
ಖಾನ್ ಯೂನಿಸ್ ನಗರ ಹಾಗೂ ಗಾಝಾ ನಗರದಲ್ಲಿ ಇಸ್ರೇಲ್ ನಡೆಸಿದ ಹಲವು ವೈಮಾನಿಕ ದಾಳಿಗಳಲ್ಲಿ 13 ಮಂದಿ ಸಾವನ್ನಪ್ಪಿದ್ದು ಮಹಿಳೆಯರು, ಮಕ್ಕಳ ಸಹಿತ ಸುಮಾರು 15 ಮಂದಿ ಗಾಯಗೊಂಡಿದ್ದಾರೆ ಎಂದು ಏಜೆನ್ಸಿಯ ವಕ್ತಾರ ಮಹ್ಮೂದ್ ಬಸ್ಸಾಲ್ ಹೇಳಿದ್ದಾರೆ. ಅಲ್-ಮವಾಸಿ ಮಾನವೀಯ ಕಾರಿಡಾರ್ ವಲಯದ ಬಳಿಯ ಶಿಬಿರದ ಮೇಲೆ ಇಸ್ರೇಲ್ ನ ಡ್ರೋನ್ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು ಇತರ ಐದು ಮಂದಿ ಗಾಯಗೊಂಡಿದ್ದಾರೆ ಎಂದು ರೆಡ್ಕ್ರೆಸೆಂಟ್ ಅಧಿಕಾರಿಗಳನ್ನು ಉಲ್ಲೇಖಿಸಿ ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಶಿಬಿರದ ಬಳಿ ಕಾರ್ಯಾಚರಿಸುತ್ತಿದ್ದ ಹಮಾಸ್ನ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಖಾನ್ ಯೂನಿಸ್ ನಗರದ ಉತ್ತರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮಹಿಳೆ ಮತ್ತು ಮಗು ಸಾವನ್ನಪ್ಪಿದ್ದು ಇತರ ಕೆಲವರು ಗಾಯಗೊಂಡಿದ್ದಾರೆ. ಗಾಝಾ ನಗರದಲ್ಲಿ ನಡೆದ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ವಫಾ ಸುದ್ದಿಸಂಸ್ಥೆಯ ವರದಿ ಹೇಳಿದೆ.
ಹೋರಾಟವು ಪೂರ್ಣ ಶಕ್ತಿಯೊಂದಿಗೆ ಪುನರಾರಂಭಗೊಳ್ಳಲಿದೆ. ಇದು ಕೇವಲ ಆರಂಭ ಮಾತ್ರ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.