ಗಾಝಾ | ಇಸ್ರೇಲ್ ದಾಳಿಯಲ್ಲಿ 14 ಫೆಲೆಸ್ತೀನೀಯರ ಮೃತ್ಯು
PC : PTI
ಗಾಝಾ : ಗಾಝಾದಲ್ಲಿ ಇಸ್ರೇಲ್ ನಡೆಸಿದ ಎರಡು ವೈಮಾನಿಕ ದಾಳಿಯಲ್ಲಿ ಇಬ್ಬರು ಮಕ್ಕಳು, ಮಹಿಳೆ ಸೇರಿದಂತೆ ಕನಿಷ್ಠ 14 ಫೆಲೆಸ್ತೀನೀಯರು ಮೃತಪಟ್ಟಿದ್ದು 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಫೆಲೆಸ್ತೀನ್ನ ಆರೋಗ್ಯ ಇಲಾಖೆ ಹೇಳಿದೆ.
ಗಾಝಾದ ಮುವಾಸಿ ನಗರದಲ್ಲಿ ಸ್ಥಳಾಂತರಿಸಲ್ಪಟ್ಟವರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಕ್ಯಾಂಟೀನ್ ಮೇಲೆ ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ ಕನಿಷ್ಠ 11 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಕ್ಯಾಂಟೀನ್ನ ಮೇಜುಗಳಡಿ ಗಾಯಗೊಂಡು ಬಿದ್ದವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿವೆ. ಮಂಗಳವಾರ ಬೆಳಿಗ್ಗೆ ಮಧ್ಯ ಗಾಝಾದ ನುಸೀರಾತ್ ನಿರಾಶ್ರಿತರ ಶಿಬಿರದ ಮನೆಯೊಂದನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಮಹಿಳೆಯ ಸಹಿತ ಮೂವರು ಸಾವನ್ನಪ್ಪಿದ್ದು 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ಮೂಲಗಳು ಹೇಳಿವೆ. ಈ ಮಧ್ಯೆ, ಉತ್ತರ ಗಾಝಾ ಪಟ್ಟಿಯಲ್ಲಿ ಭೂ ಕಾರ್ಯಾಚರಣೆ ಸಂದರ್ಭ ತನ್ನ ನಾಲ್ವರು ಸೈನಿಕರು ಹತರಾಗಿದ್ದಾರೆ ಎಂದು ಇಸ್ರೇಲಿ ಸೇನೆ ಮಂಗಳವಾರ ಹೇಳಿದೆ.
ಉತ್ತರ ಗಾಝಾ ಪಟ್ಟಿಯಲ್ಲಿ ಸೋಮವಾರ ನಡೆದ ಹೋರಾಟದ ಸಂದರ್ಭ ನಾಲ್ವರು ಯೋಧರು ಹತರಾಗಿದ್ದು ಇದರೊಂದಿಗೆ ಕಳೆದ ವರ್ಷದ ಅಕ್ಟೋಬರ್ನಲ್ಲಿ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಭೂ ಕಾರ್ಯಾಚರಣೆ ಆರಂಭಗೊಂಡಂದಿನಿಂದ ಮೃತಪಟ್ಟ ಇಸ್ರೇಲ್ ಸೈನಿಕರ ಸಂಖ್ಯೆ 376ಕ್ಕೆ ತಲುಪಿದೆ ಎಂದು ಹೇಳಿಕೆ ತಿಳಿಸಿದೆ.