ಗಾಝಾ | ಇಸ್ರೇಲ್ ದಾಳಿಯಲ್ಲಿ 17 ಫೆಲಸ್ತೀನೀಯರು ಮೃತ್ಯು
PC : PTI
ಗಾಝಾ ಪಟ್ಟಿ : ಮಂಗಳವಾರ ಗಾಝಾ ಪಟ್ಟಿಯ ದಕ್ಷಿಣ ಮತ್ತು ಮಧ್ಯ ಪ್ರಾಂತಗಳ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 17 ಫೆಲಸ್ತೀನೀಯರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.
ಗಾಝಾದ ದಕ್ಷಿಣ ಗಡಿಯ ಸನಿಹದಲ್ಲಿರುವ ರಫಾ ನಗರದಲ್ಲಿ ಮನೆಯೊಂದನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯಲ್ಲಿ ಐವರು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ನೆರೆಯ ಖಾನ್ ಯೂನಿಸ್ ನಗರದ ಮೇಲೆ ನಡೆದ ದಾಳಿಯಲ್ಲಿ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮಧ್ಯ ಗಾಝಾದ ನುಸೀರಾತ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ 4 ಫೆಲೆಸ್ತೀನೀಯರು, ಉತ್ತರ ಗಾಝಾದ ಶೇಖ್ ಝಾಯೆದ್ ಮೇಲೆ ನಡೆದ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಝಾದಲ್ಲಿ ಗುಪ್ತಚರ ಮಾಹಿತಿಯನ್ನು ಆಧರಿಸಿ ತನ್ನ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ. ಹಮಾಸ್ ಹೋರಾಟಗಾರರು, ಸುರಂಗಗಳು ಹಾಗೂ ಹಮಾಸ್ನಧ ಮಿಲಿಟರಿ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಗಾಝಾ ಪಟ್ಟಿಯಲ್ಲಿ ಹಮಾಸ್ನು ಶಸ್ತ್ರಾಸ್ತ್ರ ಸಂಗ್ರಹಾಗಾರ, ಸ್ಫೋಟಕಗಳನ್ನು ಸಂಗ್ರಹಿಸಿದ್ದ ಕಟ್ಟಡಗಳು ದಾಳಿಯ ಗುರಿಗಳಾಗಿವೆ ಎಂದು ಇಸ್ರೇಲ್ ಹೇಳಿದೆ. ಅಮೆರಿಕ, ಖತರ್, ಈಜಿಪ್ಟ್ ನೇತೃತ್ವದಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಯನ್ನು ಹಳಿತಪ್ಪಿಸುವುದು ಇಸ್ರೇಲ್ ಸೇನೆಯ ಉದ್ದೇಶವಾಗಿದೆ ಎಂದು ಹಮಾಸ್ ಆರೋಪಿಸಿದೆ.
ಈ ಮಧ್ಯೆ, ಗಾಝಾ ಸಂಘರ್ಷ ಅಂತ್ಯಗೊಳಿಸುವ ಹಾಗೂ ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಈಜಿಪ್ಟ್ ಮತ್ತು ಖತರ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದ್ದ ಮಾತುಕತೆ ಮುಂದುವರಿಯುವ ಸೂಚನೆಯಿದೆ ಎಂದು ಈಜಿಪ್ಟ್ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವಾರ ಮೂರು ದಿನ ನಡೆದಿದ್ದ ಮಾತುಕತೆ ಶನಿವಾರ ಸ್ಥಗಿತಗೊಂಡಿತ್ತು.