ಗಾಝಾ | ಇಸ್ರೇಲ್ ವೈಮಾನಿಕ ದಾಳಿಯಲ್ಲಿ 18 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ (PTI)
ಗಾಝಾ : ಗಾಝಾದ ಮೇಲಿನ ವೈಮಾನಿಕ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದ್ದು ಮಂಗಳವಾರ ರಾತ್ರಿ ನಡೆದ ದಾಳಿಯಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿರುವುದಾಗಿ ಫೆಲೆಸ್ತೀನ್ ಆರೋಗ್ಯ ಇಲಾಖೆ ಬುಧವಾರ ಹೇಳಿದೆ.
ಗಾಝಾ ನಗರದ ಉಪನಗರವಾದ ಶೆಜೈಯಾದಲ್ಲಿ ಮನೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ್ದಾರೆ. ಗಾಝಾ ಪಟ್ಟಿಯ ಇತರೆಡೆ ನಡೆದ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಗಾಝಾದ ಜಬಾಲಿಯ ನಿರಾಶ್ರಿತರ ಶಿಬಿರದ ಮೇಲೆ ಕಳೆದ ಐದು ದಿನಗಳಿಂದ ನಿರಂತರ ದಾಳಿ ನಡೆಯುತ್ತಿದೆ. ಜಬಾಲಿಯಾ ಹಾಗೂ ಇತರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವಿನ ಬಗ್ಗೆ ಮಾಹಿತಿ ದೊರಕಿದ್ದು ಇದು ದೃಢಗೊಂಡಿಲ್ಲ. ಈ ಪ್ರದೇಶದಲ್ಲಿ ನಿರಂತರ ಬಾಂಬ್ ದಾಳಿ ನಡೆಯುತ್ತಿರುವುದರಿಂದ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಫೆಲೆಸ್ತೀನ್ ನಾಗರಿಕ ತುರ್ತು ಸೇವಾ ಏಜೆನ್ಸಿ ಹೇಳಿದೆ.
ಉತ್ತರ ಗಾಝಾದಲ್ಲಿ ಕನಿಷ್ಠ 4 ಲಕ್ಷ ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರ ಏಜೆನ್ಸಿ (ಯುಎನ್ಆಷರ್ಡ4ಬ್ಲ್ಯೂಎ) ಮುಖ್ಯಸ್ಥ ಫಿಲಿಪ್ ಲಝಾರಿನಿ ಬುಧವಾರ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಅಧಿಕಾರಿಗಳ ಇತ್ತೀಚಿನ ಆದೇಶವು ಜನರಿಗೆ ನೆಲೆಯೇ ಇಲ್ಲದಂತೆ ಮಾಡುತ್ತಿದೆ. ಯಾವುದೇ ಸ್ಥಳ ಸುರಕ್ಷಿತವಾಗಿಲ್ಲದ ಕಾರಣ ಹಲವರು ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದಾರೆ. ಗಾಝಾದಲ್ಲಿ ಯಾವುದೇ ಪ್ರದೇಶ ಸುರಕ್ಷಿತವಾಗಿಲ್ಲ. ಯುದ್ಧ ಆರಂಭಗೊಂಡಂದಿನಿಂದ ಇದೇ ಮೊದಲ ಬಾರಿಗೆ ಗಾಝಾದಲ್ಲಿ ಯುಎನ್ಆ ರ್ಡ್ಬ್ಲ್ಯೂಎ ಸೇವೆಗಳನ್ನು ಬಲವಂತವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಯಾವುದೇ ಮೂಲಭೂತ ಸರಬರಾಜು ಲಭ್ಯವಿಲ್ಲದ ಕಾರಣ ಉತ್ತರ ಗಾಝಾದಲ್ಲಿ ಆಹಾರದ ಕೊರತೆ ಹೆಚ್ಚುತ್ತಿದೆ. ಇತ್ತೀಚಿಗಿನ ಮಿಲಿಟರಿ ಕಾರ್ಯಾಚರಣೆ ಮಕ್ಕಳಿಗಾಗಿ ಪೋಲಿಯೊ ಲಸಿಕೆ ಹಾಕುವ ಎರಡನೇ ಹಂತದ ಕಾರ್ಯಕ್ರಮಕ್ಕೆ ಬೆದರಿಕೆ ಒಡ್ಡಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.