ಗಾಝಾ | ಇಸ್ರೇಲ್ ದಾಳಿಯಲ್ಲಿ 73 ಮಂದಿ ಬಲಿ
PC : aljazeera.com
ಗಾಝಾ : ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸದ ಮೇಲೆ ಹಿಜ್ಬುಲ್ಲಾ ದಾಳಿಯ ಬಳಿಕ ಲೆಬನಾನ್ ಮತ್ತು ಗಾಝಾದ ಮೇಲಿನ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದ್ದು ರವಿವಾರ ಉತ್ತರ ಗಾಝಾದಲ್ಲಿ ಕನಿಷ್ಠ 73 ಫೆಲೆಸ್ತೀನಿಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
ಉತ್ತರ ಗಾಝಾದ ಬಿಯತ್ ಲಾಹಿಯಾ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳು ಹಾಗೂ ಹಲವು ಮನೆಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದು ವ್ಯಾಪಕ ಸಾವು-ನೋವು, ನಾಶ-ನಷ್ಟ ಸಂಭವಿಸಿದೆ. ದಾಳಿಯ ಬಳಿಕ ಹಲವರು ನಾಪತ್ತೆಯಾಗಿದ್ದಾರೆ. ಇಂಟರ್ನೆಟ್ ಮತ್ತು ದೂರಸಂಪರ್ಕ ಸೇವೆಗಳು ಎರಡನೇ ದಿನವೂ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಉತ್ತರ ಗಾಝಾದ ಆಸ್ಪತ್ರೆಗಳ ಸುತ್ತ ಮುತ್ತಿಗೆಯನ್ನು ಬಿಗಿಗೊಳಿಸಿದೆ ಎಂದು ಗಾಝಾ ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ. ಇದು ನರಮೇಧ ಮತ್ತು ಜನಾಂಗೀಯ ಶುದ್ಧೀಕರಣದ ಯುದ್ಧವಾಗಿದೆ. ಆಕ್ರಮಣಕಾರರ ಪಡೆ ಬಿಯತ್ ಲಾಹಿಯಾದಲ್ಲಿ ಭಯಾನಕ ಹತ್ಯಾಕಾಂಡವನ್ನು ನಡಸಿದೆ. ಜಬಾಲಿಯಾ ಶಿಬಿರ ಪ್ರದೇಶದ ಮೇಲೆ ತಮ್ಮ ಮುತ್ತಿಗೆಯನ್ನು ಬಿಗಿಗೊಳಿಸಿದ್ದು ಸಮೀಪದ ನಗರಗಳಾದ ಬಿಯತ್ ಹನೌನ್ ಹಾಗೂ ಬಿಯತ್ ಲಾಹಿಯಾಗಳಿಗೆ ಟ್ಯಾಂಕ್ ಗಳನ್ನು ರವಾನಿಸಿದೆ. ತಕ್ಷಣ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ನಿವಾಸಿಗಳಿಗೆ ಸೂಚಿಸಿದೆ ಎಂದು ಹಮಾಸ್ ಮಾಧ್ಯಮ ಕಚೇರಿ ಹೇಳಿದೆ.
ಜಬಾಲಿಯಾದಲ್ಲಿ ಸ್ಥಳಾಂತರಿತ ಕುಟುಂಬದವರು ಆಶ್ರಯ ಪಡೆದಿದ್ದ ಹಲವು ಶಿಬಿರಗಳಿಗೆ ಮುತ್ತಿಗೆ ಹಾಕಿದ್ದ ಇಸ್ರೇಲ್ ಪಡೆಗಳು ಹಲವು ಪುರುಷರನ್ನು ಬಂಧಿಸಿವೆ. ಹಲವು ಮನೆಗಳಿಗೆ ಬಾಂಬ್ ದಾಳಿ ನಡೆಸಿ ಆಸ್ಪತ್ರೆಗಳಿಗೆ ಮುತ್ತಿಗೆ ಹಾಕಿರುವುದರಿಂದ ಔಷಧ ಹಾಗೂ ಆಹಾರ ನೆರವು ಪೂರೈಕೆಗೆ ತಡೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಉತ್ತರ ಗಾಝಾದಲ್ಲಿನ ಆಸ್ಪತ್ರೆಗಳಲ್ಲಿ ಔಷಧ ಪೂರೈಕೆ ಹಾಗೂ ವೈದ್ಯಕೀಯ ಸಿಬ್ಬಂದಿಗಳ ತೀವ್ರ ಕೊರತೆ ಎದುರಾಗಿದ್ದು ಸಾವು-ನೋವಿನ ಸಂಖ್ಯೆ ಹೆಚ್ಚಿದೆ. ಗಾಯಾಳುಗಳಲ್ಲಿ ತುರ್ತು ಚಿಕಿತ್ಸೆಯ ಅಗತ್ಯ ಇರುವವರನ್ನು ಗುರುತಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಇದರಿಂದಾಗಿ ಸಕಾಲದಲ್ಲಿ ಚಿಕಿತ್ಸೆ ದೊರಕದೆ ಹಲವು ಗಾಯಾಳುಗಳು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಉತ್ತರ ಗಾಝಾದಲ್ಲಿ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಆಗಿರುವ ಸಾವು-ನೋವುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಹಮಾಸ್ ಮೂಲಗಳು ಉತ್ಪ್ರೇಕ್ಷಿತ ಮಾಹಿತಿ ಒದಗಿಸುತ್ತಿವೆ. ನಾಗರಿಕರನ್ನು ಹಮಾಸ್ ಸದಸ್ಯರಿಂದ ಪ್ರತ್ಯೇಕಿಸಲು ಸ್ಥಳಾಂತರ ಆದೇಶ ನೀಡಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದ್ದು, ಜಬಾಲಿಯಾ ಹಾಗೂ ಉತ್ತರದ ಇತರ ಪ್ರದೇಶಗಳಿಂದ ನಾಗರಿಕರನ್ನು ತೆರವುಗೊಳಿಸಲು ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ ಎಂಬ ವರದಿಯನ್ನು ನಿರಾಕರಿಸಿದೆ.
►ಸಿನ್ವರ್ ಕರಪತ್ರ
ಈ ಮಧ್ಯೆ, ಶನಿವಾರ ದಕ್ಷಿಣ ಗಾಝಾದ್ಯಂತ ಇಸ್ರೇಲ್ ವಿಮಾನಗಳು ಕರಪತ್ರಗಳನ್ನು ಉದುರಿಸಿವೆ. ಇವುಗಳಲ್ಲಿ ಹಮಾಸ್ ನ ಮೃತ ನಾಯಕ ಯಾಹ್ಯ ಸಿನ್ವರ್ ಫೋಟೋದ ಜತೆಗೆ `ಹಮಾಸ್ ಇನ್ನು ಮುಂದೆ ಗಾಝಾವನ್ನು ಆಳುವುದಿಲ್ಲ' ಎಂಬ ಸಂದೇಶವನ್ನು ಮುದ್ರಿಸಲಾಗಿದೆ. `ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಒತ್ತೆಯಾಳುಗಳನ್ನು ಹಸ್ತಾಂತರಿಸುವವರನ್ನು ಶಾಂತಿಯಿಂದ ಬದುಕಲು ಬಿಡಲಾಗುವುದು' ಎಂದು ಕರಪತ್ರದಲ್ಲಿ ಸೂಚಿಸಲಾಗಿದೆ.