ಗಾಝಾ: ಇಸ್ರೇಲ್ ದಾಳಿಯಲ್ಲಿ 27 ಫೆಲೆಸ್ತೀನೀಯರ ಸಾವು
ಸಾಂದರ್ಭಿಕ ಚಿತ್ರ | PC : PTI
ಗಾಝಾ ಪಟ್ಟಿ : ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 27 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಬುಧವಾರ ವರದಿ ಮಾಡಿದೆ.
ಮಧ್ಯ ಗಾಝಾ ಪಟ್ಟಿಯ ಡೀರ್ ಎಲ್-ಬಲಾಹ್ ನಗರದಲ್ಲಿನ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 7 ವರ್ಷದ ಬಾಲಕನ ಸಹಿತ 11 ಮಂದಿ ಮೃತಪಟ್ಟಿದ್ದಾರೆ. ಗಾಝಾ ನಗರದಲ್ಲಿ ಯುದ್ಧದಿಂದ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಶಾಲಾ ಕಟ್ಟಡದ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದಾರೆ. ಅಲ್-ನುಸೀರಾತ್ ನಿರಾಶ್ರಿತರ ಶಿಬಿರ ಪ್ರದೇಶದ ಮನೆಯೊಂದರ ಮೇಲೆ ಬುಧವಾರ ಬೆಳಿಗ್ಗೆ ನಡೆದ ಮೂರನೇ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದು 7 ಮಂದಿ ಗಾಯಗೊಂಡಿದ್ದಾರೆ. ಗಾಝಾ ನಗರದ ಅಲ್-ಶಾತಿ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ಇಸ್ರೇಲ್ ಮಿಲಿಟರಿ ಉತ್ತರ ಗಾಝಾದ ನಿವಾಸಿಗಳಿಗೆ ತಕ್ಷಣ ಸ್ಥಳಾಂತರಗೊಳ್ಳುವಂತೆ ಸೂಚಿಸಿರುವುದಾಗಿ ವರದಿಯಾಗಿದೆ.