ಶೀತಗಾಳಿ: ಗಾಝಾದಲ್ಲಿ 6 ನವಜಾತ ಶಿಶುಗಳ ಮೃತ್ಯು

ಸಾಂದರ್ಭಿಕ ಚಿತ್ರ (Photo - PTI)
ಗಾಝಾ ನಗರ: ಯುದ್ಧದಿಂದ ಜರ್ಝರಿತಗೊಂಡಿರುವ ಫೆಲೆಸ್ತೀನ್ ಪ್ರದೇಶದಲ್ಲಿ ಬೀಸುತ್ತಿರುವ ಶೀತಗಾಳಿಯಿಂದ ಆರು ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಮಂಗಳವಾರ ಹೇಳಿದೆ.
ತೀವ್ರವಾದ ಶೀತಗಾಳಿ ಹಾಗೂ ತಾಪನದ(ವಾತಾವರಣ ಬೆಚ್ಚಗಿರಿಸುವ ಸಾಧನ) ಕೊರತೆಯಿಂದಾಗಿ ಕಳೆದ ಒಂದು ವಾರದಲ್ಲಿ 6 ನವಜಾತ ಶಿಶುಗಳ ಸಾವುಗಳನ್ನು ದಾಖಲಿಸಿದ್ದೇವೆ ಎಂದು ಏಜೆನ್ಸಿಯ ವಕ್ತಾರ ಮಹ್ಮೂದ್ ಬಸ್ಸಾಲ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪೂರ್ವ ಮೆಡಿಟರೇನಿಯನ್ನಲ್ಲಿ ಶೀತ ಗಾಳಿ ಬೀಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ತಾಪಮಾನವು ಶೂನ್ಯ ಡಿಗ್ರಿ ಸೆಲ್ಶಿಯಸ್ಗೆ ಇಳಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗಾಝಾದಲ್ಲಿ ಕದನ ವಿರಾಮ ಜಾರಿಗೊಂಡಿದ್ದರೂ ಸಾವಿರಾರು ಫೆಲೆಸ್ತೀನೀಯರು ಇನ್ನೂ ಟೆಂಟ್ಗಳಲ್ಲೇ ವಾಸಿಸುವ ಸ್ಥಿತಿಯಿದೆ. ಗಾಝಾ ಪ್ರದೇಶದಲ್ಲಿ ಬಹುತೇಕ ಮನೆಗಳು ಧ್ವಂಸಗೊಂಡಿದ್ದು ಮನೆ ನಿರ್ಮಾಣ ವಸ್ತುಗಳು ಗಾಝಾಕ್ಕೆ ಪೂರೈಕೆಯಾಗುವುದನ್ನು ಇಸ್ರೇಲ್ ತಡೆಯುತ್ತಿದೆ ಎಂದು ಹಮಾಸ್ ಆರೋಪಿಸಿದೆ.