ಗಾಝಾ: ಇಸ್ರೇಲ್ ದಾಳಿಯಲ್ಲಿ 22 ಮಂದಿ ಸಾವು
ಸಾಂದರ್ಭಿಕ ಚಿತ್ರ PC : NDTV
ಗಾಝಾ: ಶುಕ್ರವಾರ ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದು ಇತರ 45 ಮಂದಿ ಗಾಯಗೊಂಡಿದ್ದಾರೆ. ಗಾಝಾದಲ್ಲಿರುವ ತನ್ನ ಕಚೇರಿಗೆ ತೀವ್ರ ಹಾನಿಯಾಗಿದೆ ಎಂದು ರೆಡ್ಕ್ರಾಸ್ ಅಂತರಾಷ್ಟ್ರೀಯ ಸಮಿತಿ ಹೇಳಿದೆ.
ಗಾಝಾದಲ್ಲಿ ಇಸ್ರೇಲ್ ಭಾರೀ ಸಾಮಥ್ರ್ಯದ ಸ್ಫೋಟಕಗಳೊಂದಿಗೆ ನಡೆಸಿದ ದಾಳಿಯಲ್ಲಿ ವ್ಯಾಪಕ ಪ್ರಾಣಹಾನಿ ಸಂಭವಿಸಿದ್ದು ರೆಡ್ಕ್ರಾಸ್ ಕ್ಷೇತ್ರ ಆಸ್ಪತ್ರೆಗೆ 22 ಮೃತದೇಹ ಹಾಗೂ 45 ಗಾಯಾಳುಗಳನ್ನು ಸಾಗಿಸಲಾಗಿದೆ. ಮಾನವೀಯ ನೆರವಿನ ಸಂಸ್ಥೆಗಳ ಬಳಿಯಲ್ಲಿ ಹೀಗೆ ಅಪಾಯಕಾರಿ ರೀತಿಯಲ್ಲಿ ವೈಮಾನಿಕ ದಾಳಿ ನಡೆಸುವುದು ನಾಗರಿಕರು ಮತ್ತು ಮಾನವೀಯ ನೆರವು ಕಾರ್ಯಕರ್ತರ ಬದುಕನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ರೆಡ್ಕ್ರಾಸ್ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್ ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿರುವುದಾಗಿ ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ನಗರದಲ್ಲಿನ ಗ್ಯಾರೇಜ್ ಒಂದರ ಮೇಲಿನ ಬಾಂಬ್ದಾಳಿಯಲ್ಲಿ ಐವರು ಪುರಸಭೆ ಸಿಬಂದಿಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಉತ್ತರ ಇಸ್ರೇಲ್ನಲ್ಲಿ ಇಸ್ರೇಲ್ನ ಸೇನಾ ನೆಲೆಗಳನ್ನು ಗುರಿಯಾಗಿಸಿ ರಾಕೆಟ್ಗಳ ಮಳೆಗರೆದಿರುವುದಾಗಿ ಲೆಬನಾನ್ ಮೂಲದ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿದೆ.