ಗಾಝಾ | ಇಸ್ರೇಲ್ ದಾಳಿಯಲ್ಲಿ 4 ಮಂದಿ ಮೃತ್ಯು; 40 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ | PC : PTI
ಗಾಝಾ : ಸೋಮವಾರ ಬೆಳಿಗ್ಗೆ ಗಾಝಾ ಪಟ್ಟಿಯಲ್ಲಿರುವ ಆಸ್ಪತ್ರೆಯ ಬಳಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದಾರೆ.
ಬಾಂಬ್ ದಾಳಿಯ ಬಳಿಕ ಈ ಪ್ರದೇಶದಲ್ಲಿ ಸ್ಥಳಾಂತರಗೊಂಡವರು ಆಶ್ರಯ ಪಡೆದಿರುವ ತಾತ್ಕಾಲಿಕ ಶಿಬಿರಕ್ಕೆ ಬೆಂಕಿ ಹರಡಿದ್ದು 24ಕ್ಕೂ ಅಧಿಕ ಮಂದಿ ಸುಟ್ಟ ಗಾಯಕ್ಕೆ ಒಳಗಾಗಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ. ಆಸ್ಪತ್ರೆ ಮತ್ತು ಶಿಬಿರದಲ್ಲಿ ನಾಗರಿಕರ ನಡುವೆ ಹಮಾಸ್ ಸಶಸ್ತ್ರ ಹೋರಾಟಗಾರರು ಅವಿತುಕೊಂಡಿರುವ ಬಗ್ಗೆ ಖಚಿತ ಮಾಹಿತಿಯ ಬಳಿಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
ಗಾಝಾದ ಅಲ್-ಅಖ್ಸಾ ಆಸ್ಪತ್ರೆಯ ಆವರಣದ ಮೇಲೆ ಬಾಂಬ್ ದಾಳಿ ನಡೆದಿದ್ದು ಗಾಯಗೊಂಡವರಲ್ಲಿ ಹಲವು ಮಕ್ಕಳೂ ಸೇರಿದ್ದಾರೆ. ಪಕ್ಕದಲ್ಲೇ ಇರುವ ಶಿಬಿರಗಳಲ್ಲಿ ಬೆಂಕಿ ಉರಿಯುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. 40 ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಇವರಲ್ಲಿ ತೀವ್ರ ಸುಟ್ಟಗಾಯಕ್ಕೆ ಒಳಗಾದ 25 ಮಂದಿಯನ್ನು ದಕ್ಷಿಣ ಗಾಝಾದ ನಾಸೆರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಲ್-ಅಖ್ಸಾ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.