ಗಾಝಾದಲ್ಲಿ ಮಾನವೀಯ ಪರಿಸ್ಥಿತಿ ಸುಧಾರಣೆಗೆ ತುರ್ತು ಕ್ರಮ : ಇಸ್ರೇಲ್ ಗೆ ಅಮೆರಿಕ ಆಗ್ರಹ
ಸಾಂದರ್ಭಿಕ ಚಿತ್ರ | PTI
ನ್ಯೂಯಾರ್ಕ್ : ಗಾಝಾದಲ್ಲಿ ಮಾನವೀಯ ನೆರವನ್ನು ಸುಧಾರಿಸಲು ಇಸ್ರೇಲ್ ತಕ್ಷಣ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮಂಗಳವಾರ ಆಗ್ರಹಿಸಿದ್ದಾರೆ.
`ಗಾಝಾದಲ್ಲಿ ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಅಮೆರಿಕದ ಕಳವಳವನ್ನು ಸೂಚಿಸಿದ್ದೇವೆ ಮತ್ತು ಈ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರದಿಂದ ತುರ್ತು ಮತ್ತು ನಿರಂತರ ಕ್ರಮಗಳನ್ನು ಬಯಸುತ್ತೇವೆ' ಎಂದು ಇಸ್ರೇಲ್ ವಿದೇಶಾಂಗ ಸಚಿವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಲಾಗಿದೆ. ಅಮೆರಿಕದ ವಿದೇಶಿ ನೆರವು ಕಾಯ್ದೆಯ 620ನೇ ಸೆಕ್ಷನ್ ಪ್ರಕಾರ ` ಅಮೆರಿಕದ ಮಾನವೀಯ ನೆರವು ಪೂರೈಕೆಗೆ ಅಡ್ಡಿಪಡಿಸುವ ದೇಶಗಳಿಗೆ ಮಿಲಿಟರಿ ನೆರವನ್ನು ನಿರ್ಬಂಧಿಸಲಾಗುವುದು' ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಗಾಝಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಮೆರಿಕ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸುವ ಮೂಲಕ ಇಸ್ರೇಲ್ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿರಬಹುದು ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.