ಗಾಝಾ | ಇಸ್ರೇಲ್ ವಾಯುದಾಳಿಗೆ ಕನಿಷ್ಠ 20 ನಾಗರಿಕರ ಮೃತ್ಯು
ಸುರಕ್ಷಿತ ಪ್ರದೇಶವೆಂದು ಘೋಷಿಸಿದ ಪ್ರದೇಶದಲ್ಲೇ ನಾಗರಿಕರ ಮೇಲೆ ಆಕ್ರಮಣ ನಡೆಸಿದ ಇಸ್ರೇಲಿ ಸೇನೆ
ಸಾಂದರ್ಭಿಕ ಚಿತ್ರ
ದೆಯಿರ್ ಅಲ್-ಬಲಾಹ್ : ಕೇಂದ್ರ ಗಾಝಾದಲ್ಲಿ ಬುಧವಾರ ನಸುಕಿನಲ್ಲಿ ಇಸ್ರೇಲ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಆರು ಮಂದಿ ಮಕ್ಕಳು ಹಾಗೂ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ 20 ಮಂದಿ ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಕೆಲವರು ಇಸ್ರೇಲ್ ಸೇನೆ ಸುರಕ್ಷಿತ ವಲಯವೆಂದು ಘೋಷಿಸಿದ್ದ ಸ್ಥಳಗಳಲ್ಲಿ ನೆಲೆಸಿದ್ದವರೆಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆಗೆ ಕತರ್ ರಾಜಧಾನಿ ದೋಹಾದಲ್ಲಿ ಅಮೆರಿಕ, ಈಜಿಪ್ಟ್ ಹಾಗೂ ಕತಾರಿ ಸಂಧಾನಕಾರರು ಸುದೀರ್ಘ ಮಾತುಕತೆ ನಡೆಸುತ್ತಿರುವ ಸಮಯದಲ್ಲಿ ಈ ಭೀಕರ ದಾಳಿ ನಡೆದಿದೆ.
ಬುಧವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ನುಸೈರತ್ ನಿರಾಶ್ರಿತ ಶಿಬಿರದಲ್ಲಿನ ಮೂರು ಮನೆಗಳು ನಾಶವಾಗಿದ್ದು, 1948ರಲ್ಲಿ ನಡೆದ ಸಮರದಲ್ಲಿ ತಾಯ್ನಾಡಿನಿಂದ ಹೊರದಬ್ಬಲ್ಪಟ್ಟ ಫೆಲೆಸ್ತೀನಿಯರಿಗಾಗಿ ನಿರ್ಮಿಸಲ್ಪಟ್ಟಿತ್ತು. ಆದರೆ ಹಲವು ದಶಕಗಳಿಂದ ಅದು ನಗರವಸತಿ ಪ್ರದೇಶವಾಗಿ ಬೆಳವಣಿಗೆ ಹೊಂದಿದೆ.
ಬುಧವಾರ ಮುಂಜಾನೆ ನಡೆದ ನಾಲ್ಕನೇ ದಾಳಿಯನ್ನು ಇಸ್ರೇಲ್, ಮಾನವ ಸುರಕ್ಷಿತ ವಲಯವೆಂದು ತಾನು ಘೋಷಿಸಿದ ಪ್ರದೇಶದೊಳಗೆ ನಡೆದಿದೆ. ಈ ದಾಳಿಯಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರು ಹಾಗೂ ಒಂದು ಮಗು ಸಾವನ್ನಪ್ಪಿದೆ. ಹಮಾಸ್ ಹೋರಾಟಗಾರರ ವಿರುದ್ಧ ಗಾಝಾ ಪಟ್ಟಿಯ ವಿವಿಧೆಡೆ ಆಕ್ರಮಣಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ರಕ್ಷಣೆಯನ್ನು ಪಡೆಯಬಹುದೆಂದು ಇಸ್ರೇಲ್ ಸೇನೆ ಗಾಝಾ ನಾಗರಿಕರಿಗೆ ತಿಳಿಸಿತ್ತು.
ಇಸ್ರೇಲಿ ಯುದ್ಧ ವಿಮಾನಗಳು ಖಾನ್ ಯೂನಿಸ್ ನಗರದ ದಕ್ಷಿಣ ಭಾಗದ ಹೊರಗಡೆ ಸಂತ್ರಸ್ತ ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದ ಶಾಲಾ ಕಟ್ಟಡದ ಪ್ರವೇಶದ್ವಾರದ ದಾಳಿ ನಡೆಸಿದ ಕೆಲವೇ ತಾಸುಗಳ ಬಳಿಕ ಈ ಭೀಕರ ಬಾಂಬ್ ದಾಳಿ ನಡೆದಿದೆ.