ಗಾಝಾ: ಇಸ್ರೇಲ್ ದಾಳಿಯಲ್ಲಿ ಕನಿಷ್ಟ 5 ಫೆಲೆಸ್ತೀನೀಯರು ಮೃತ್ಯು
ಸಾಂದರ್ಭಿಕ ಚಿತ್ರ | PC : PTI
ಗಾಝಾ: ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದ ಬಳಿ ಗುರುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಟ 5 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಫೆಲೆಸ್ತೀನ್ ಮೂಲಗಳು ಹೇಳಿವೆ.
ಖಾನ್ ಯೂನಿಸ್ ನಗರದ ಬಳಿ ನಡೆದ ದಾಳಿಯಲ್ಲಿ ಮೂವರು ಫೆಲೆಸ್ತೀನೀಯರು, ಸಾವನ್ನಪ್ಪಿದ್ದರೆ, ಉತ್ತರ ಗಾಝಾದಲ್ಲಿ ಕಮಲ್ ಅದ್ವಾನ್ ಆಸ್ಪತ್ರೆಯ ಪಶ್ಚಿಮದಲ್ಲಿರುವ ಮನೆಯೊಂದನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಇಬ್ಬರು ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಆಸ್ಪತ್ರೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
ಜತೆಗೆ, ಆಕ್ರಮಿತ ಪಶ್ಚಿಮದಂಡೆಯ ತುಲ್ಕರೆಮ್ ನಗರದ ಬಳಿ ಕಾರೊಂದನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 4 ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಫೆಲೆಸ್ತೀನ್ನ ಆರೋಗ್ಯ ಇಲಾಖೆ ಗುರುವಾರ ಹೇಳಿದೆ.
ಈ ಮಧ್ಯೆ, ಉತ್ತರ ಗಾಝಾಕ್ಕೆ ನೆರವು ವಿತರಿಸಲು ವಿಶ್ವಸಂಸ್ಥೆ ನೆರವು ಏಜೆನ್ಸಿಯ ಸಿಬ್ಬಂದಿಯನ್ನು ಇಸ್ರೇಲ್ ಮತ್ತೆ ತಡೆದಿದೆ ಎಂದು ವಿಶ್ವಸಂಸ್ಥೆ ಏಜೆನ್ಸಿಯ ವಕ್ತಾರರು ಹೇಳಿದ್ದಾರೆ.