ಗಾಝಾ ಕದನವಿರಾಮ : ಹೊಸ ಸಂಧಾನಸೂತ್ರ ಪ್ರಸ್ತಾವಿಸಿದ ಅಮೆರಿಕ
ಟೆಲ್‍ಅವೀವ್ : ಗಾಝಾದಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿ ಅಮೆರಿಕ ಹೊಸ ಸಂಧಾನ ಸೂತ್ರವನ್ನು ಪ್ರಸ್ತಾವಿಸಿದೆ ಎಂದು ಇಸ್ರೇಲ್‍ನ ಅಧಿಕಾರಿ ಹೇಳಿದ್ದಾರೆ.
ಹಮಾಸ್ ಬಿಡುಗಡೆಗೊಳಿಸುವ ಒತ್ತೆಯಾಳುಗಳಿಗೆ ಪ್ರತಿಯಾಗಿ ಇಸ್ರೇಲ್ ಬಿಡುಗಡೆಗೊಳಿಸಬೇಕಿರುವ ಫೆಲೆಸ್ತೀನ್ ಕೈದಿಗಳ ಬಗ್ಗೆ ಅಮೆರಿಕದ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಖತರ್ ನ ದೋಹಾದಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಯಲ್ಲಿ ಇಸ್ರೇಲ್‍ನ ಗುಪ್ತಚರ ಇಲಾಖೆ ಮೊಸಾದ್‍ನ ಮುಖ್ಯಸ್ಥ ಡೇವಿಡ್ ಬರ್ನೆಯ್ ನೇತೃತ್ವದ ಇಸ್ರೇಲ್ ನಿಯೋಗ ಪಾಲ್ಗೊಂಡಿದೆ. ಅಮೆರಿಕದ ಸಿಐಎ ನಿರ್ದೇಶಕ ವಿಲಿಯಂ ಬನ್ರ್ಸ್, ಖತರ್ ಮತ್ತು ಈಜಿಪ್ಟ್‍ನ ಅಧಿಕಾರಿಗಳು ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಮಾಸ್‍ನ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ಎಷ್ಟು ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಬೇಕು ಎಂಬ ವಿಷಯದಲ್ಲಿ ಅಮೆರಿಕ ಸ್ಪಷ್ಟವಾದ ನಿಲುವು ಮುಂದಿರಿಸಿದೆ. ಇದಕ್ಕೆ ನಮ್ಮ ಒಪ್ಪಿಗೆಯಿದೆ, ಇದೀಗ ಚೆಂಡು ಹಮಾಸ್‍ನ ಅಂಗಳದಲ್ಲಿದೆ ಎಂದು ಇಸ್ರೇಲ್ ಅಧಿಕಾರಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಹಮಾಸ್‍ನ ಉನ್ನತ ಮುಖಂಡರು ಮುಂದಿಟ್ಟ ಪ್ರಸ್ತಾವನೆಯಂತೆ `ಹಮಾಸ್‍ನ ಒತ್ತೆಸೆರೆಯಲ್ಲಿರುವ ಮಹಿಳೆಯರು, ಅಪ್ರಾಪ್ತ ವಯಸ್ಕರು, ಹಿರಿಯ ನಾಗರಿಕರ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ಸುಮಾರು 1000 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಬೇಕಾಗಿದೆ'. ಆದರೆ ಈ ಷರತ್ತನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಇಸ್ರೇಲ್ ತಿರಸ್ಕರಿಸಿತ್ತು.
ಇದೀಗ ಅಮೆರಿಕ ಮುಂದಿರಿಸಿರುವ ಹೊಸ ಪ್ರಸ್ತಾವನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಸ್ರೇಲ್ ಬಹಿರಂಗಪಡಿಸಿಲ್ಲ.