ಯುದ್ಧದ ಬಳಿಕ ಗಾಝಾವನ್ನು ಇಸ್ರೇಲ್ ನಮಗೆ ಹಸ್ತಾಂತರಿಸಲಿದೆ; ಅಮೆರಿಕದ ಯೋಧರ ಅಗತ್ಯವೇ ಇಲ್ಲ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಯುದ್ಧ ಮುಗಿದ ಬಳಿಕ ಇಸ್ರೇಲ್ ಗಾಝಾವನ್ನು ಅಮೆರಿಕಕ್ಕೆ ಹಸ್ತಾಂತರಿಸುತ್ತದೆ. ಈ ಪ್ರದೇಶದ ಜನಸಂಖ್ಯೆಯನ್ನು ಈಗಾಗಲೇ ಬೇರೆಡೆಗೆ ಪುನವರ್ಸತಿ ಮಾಡಿರುವುದರಿಂದ ಅಲ್ಲಿ ಅಮೆರಿಕದ ಪಡೆಗಳ ಅಗತ್ಯ ಇರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.
ಯುದ್ಧದಿಂದ ಜರ್ಜರಿತಗೊಂಡ ಗಾಝಾ ಪಟ್ಟಿಯನ್ನು ವಶಕ್ಕೆ ಪಡೆದು ಅದನ್ನು ಅಭಿವೃದ್ಧಿಪಡಿಸುವುದಾಗಿ, ಗಾಝಾ ವಶಪಡಿಸಿಕೊಳ್ಳಲು ಅಗತ್ಯಬಿದ್ದರೆ ಸೇನೆಯನ್ನು ನಿಯೋಜಿಸುವುದನ್ನೂ ತಳ್ಳಿಹಾಕಲಾಗದು. ದೀರ್ಘಕಾಲದ ಸಂಘರ್ಷದಿಂದ ಜರ್ಜರಿತಗೊಂಡಿರುವ ಗಾಝಾ ಪ್ರದೇಶದ ಸಂಪೂರ್ಣ ಫೆಲೆಸ್ತೀನಿಯನ್ ಸಮುದಾಯವನ್ನು, ಅಂದರೆ ಸುಮಾರು 20 ಲಕ್ಷ ಜನರನ್ನು ಈಜಿಪ್ಟ್ ಮತ್ತು ಜೋರ್ಡಾನ್ನಂತಹ ದೇಶಗಳಿಗೆ ಶಾಶ್ವತವಾಗಿ ಸ್ಥಳಾಂತರಿಸಬೇಕು' ಎಂದು ಟ್ರಂಪ್ ಮಂಗಳವಾರ ನೀಡಿದ್ದ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟೀಕರಣ ನೀಡಿರುವ ಟ್ರಂಪ್ `ಯುದ್ಧ ಮುಗಿದ ಬಳಿಕ ಗಾಝಾ ಪಟ್ಟಿಯನ್ನು ಅಮೆರಿಕಕ್ಕೆ ಇಸ್ರೇಲ್ ಹಸ್ತಾಂತರಿಸಲಿದೆ. ಅಲ್ಲಿರುವ ಫೆಲೆಸ್ತೀನೀಯರು ಈಗಾಗಲೇ ಈ ಜರ್ಜರಿತ ಪ್ರದೇಶದಿಂದ ದೂರದಲ್ಲಿ ಹೊಸ ಮತ್ತು ಆಧುನಿಕ ಮನೆಗಳೊಂದಿಗೆ ಸುರಕ್ಷಿತ ಸಮುದಾಯದಲ್ಲಿ ಈಗಾಗಲೇ ಪುನವರ್ಸತಿ ಪಡೆದಿದ್ದಾರೆ. ಅಮೆರಿಕದ ಯಾವುದೇ ಯೋಧರ ಅಗತ್ಯಬೀಳದು' ಎಂದಿದ್ದಾರೆ. ಗಾಝಾ ಮೇಲಿನ ನಿಯಂತ್ರಣವು ದಶಕಗಳಿಂದ ಅರಬ್-ಇಸ್ರೇಲಿ ಸಂಘರ್ಷದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಈ ಮಧ್ಯೆ, ಟ್ರಂಪ್ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ` ಅಧ್ಯಕ್ಷರು ಗಾಝಾದಿಂದ ಫೆಲೆಸ್ತೀನೀಯರನ್ನು ಶಾಶ್ವತವಾಗಿ ಸ್ಥಳಾಂತರಿಸುವ ಮಾತುಗಳನ್ನು ಆಡಿಲ್ಲ. ಗಾಝಾದ ಮರು ನಿರ್ಮಾಣಕ್ಕಾಗಿ ಅಲ್ಲಿನ ಸುಮಾರು 1.8 ದಶಲಕ್ಷ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವುದು ಅವರ ಉದ್ದೇಶವಾಗಿದೆ' ಎಂದಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28