ಅಮೆರಿಕ ಚುನಾವಣೆ | ಗಾಝಾ ಬಿಕ್ಕಟ್ಟು ಪ್ರಮುಖ ಸಮಸ್ಯೆಯಾಗಿ ಪರಿಗಣಿಸುತ್ತಿರುವ ನ್ಯೂಯಾರ್ಕ್ ಮುಸ್ಲಿಮರು!
Photo : Reuters
ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಇಸ್ಲಾಮಿಕ್ ಕಲ್ಚರಲ್ ಸೆಂಟರ್ನಲ್ಲಿ ನೆರೆಯ ನೂರಾರು ಮುಸ್ಲಿಮರು ಶುಕ್ರವಾರದ ದಿನ ಗಾಝಾದ ನಾಗರಿಕರಿಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ಅನೇಕ ನ್ಯೂಯಾರ್ಕ್ ಮುಸ್ಲಿಮರು ಗಾಝಾದಲ್ಲಿನ ಬಿಕ್ಕಟ್ಟು ನಮ್ಮ ಪ್ರಮುಖ ಸಮಸ್ಯೆಯಾಗಿದೆ ಎಂದು ಪರಿಗಣಿಸುತ್ತಿದ್ದಾರೆ.
ಕಾರ್ಪೊರೇಟ್ ಉದ್ಯೋಗಿಯಾಗಿರುವ ಅಲಿ, ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನಮ್ಮ ದೇಶಿಯ ಸಮಸ್ಯೆ ಏನೂ ಅಲ್ಲ ಎಂಬಂತಿದೆ. ನಮ್ಮಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದರೆ ಗಾಝಾದಲ್ಲಿ ನಾವು ನೋಡುತ್ತಿರುವ ಸ್ಥಿತಿ ಇದ್ಯಾವುದಕ್ಕೂ ಸರಿಸಾಟಿಯಲ್ಲ. ಅಭ್ಯರ್ಥಿಗಳ ಮಾತುಗಳು ಮತ್ತು ಕಾರ್ಯಗಳಿಂದ ಮುಸ್ಲಿಂ ಸಮುದಾಯ ಆಶಾದಾಯಕವಾಗಿಲ್ಲ ಎಂದು ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷವು ಗಾಝಾದ ಬಗ್ಗೆ ಸಹಾನುಭೂತಿ ಹೊಂದಿಲ್ಲ ಎಂದು ಹಲವರು ಭಾವಿಸುತ್ತಾರೆ. ಇದು ಅವರ ಮತದಾನದ ನಿರ್ಧಾರಗಳ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ.
ನ್ಯೂಯಾರ್ಕ್ ನಲ್ಲಿರುವ ಅಮೆರಿಕನ್ ಮತದಾರರು, ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ತಮ್ಮ ಮತದಾನದ ನಿರ್ಧಾರಗಳಲ್ಲಿ ಗಾಝಾದಲ್ಲಿನ ಬಿಕ್ಕಟ್ಟನ್ನು ಮುಖ್ಯವಾಗಿ ಪರಿಗಣಿಸಲಿದ್ದಾರೆ. ಗಾಝಾದ ವಿನಾಶಕಾರಿ ಸಂಘರ್ಷವು ನಿರ್ಣಾಯಕ ಸಮಸ್ಯೆಯಾಗಿದೆ. ಇತ್ತೀಚಿನ ಸಮೀಕ್ಷೆಯು ಗಾಝಾದ ಮೇಲಿನ ಯುದ್ಧವು ಬಹುಪಾಲು ಮುಸ್ಲಿಂ ಮತದಾರರಿಗೆ ಅಂದರೆ ಶೇ.61ರಷ್ಟು ಮಂದಿಯ ಕಾಳಜಿಯಾಗಿದೆ ಎಂದು ಪತ್ತೆ ಹಚ್ಚಿದೆ.
ನಮಗೆ, ಗಾಝಾ ಪರಿಸ್ಥಿತಿ ಬಹಳ ಮುಖ್ಯ. ಯುದ್ಧ ಕೊನೆಗೊಳ್ಳಬೇಕು. ಗರ್ಭಪಾತಕ್ಕೆ ಸಂಬಂಧಿಸಿದ ಹಕ್ಕುಗಳು ಮತ್ತು LGBTQ ಸಮಸ್ಯೆ ಇದೆಲ್ಲ ಮುಖ್ಯವಾಗಿದೆ. ಆದರೆ ಇದೆಲ್ಲದಕ್ಕೂ ಮಿಗಿಲಾಗಿ ಗಾಝಾದಲ್ಲಿನ ಪರಿಸ್ಥಿತಿಯು ಮುಖ್ಯವಾಗಿದೆ ಎಂದು ನ್ಯೂಯಾರ್ಕ್ ನ ಲಾಂಗ್ ಐಲ್ಯಾಂಡ್ ನ ನಿವಾಸಿ ವಕಾಸ್ ಹೇಳಿದ್ದಾರೆ.