ಗಾಝಾ: ಇಸ್ರೇಲ್ ದಾಳಿಯಲ್ಲಿ ಆರೋಗ್ಯಾಧಿಕಾರಿ ಮೃತ್ಯು
ಸಾಂದರ್ಭಿಕ ಚಿತ್ರ PC : NDTV
ಗಾಝಾ : ಗಾಝಾ ನಗರದ ವೈದ್ಯಕೀಯ ಕೇಂದ್ರವನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಝಾದ ಆಂಬ್ಯುಲೆನ್ಸ್ ಮತ್ತು ತುರ್ತು ಸೇವಾ ವಿಭಾಗದ ನಿರ್ದೇಶಕ ಹನಿ ಅಲ್ ಜಾಫರಾವಿ ಸಾವನ್ನಪ್ಪಿರುವುದಾಗಿ ಗಾಝಾ ಆರೋಗ್ಯ ಇಲಾಖೆ ಸೋಮವಾರ ಹೇಳಿದೆ.
ದಾಳಿಯಲ್ಲಿ ಹಮಾಸ್ನ ಹಿರಿಯ ಕಮಾಂಡರ್ ಕೂಡಾ ಮೃತಪಟ್ಟಿದ್ದು ಅಕ್ಟೋಬರ್ 7ರಿಂದ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವ ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆ 500ಕ್ಕೆ ತಲುಪಿದ್ದು ಇತರ ಕನಿಷ್ಟ 300 ಸಿಬ್ಬಂದಿ ಇಸ್ರೇಲ್ ಪಡೆಯ ವಶದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಹಮಾಸ್ನ ಶಸ್ತ್ರಾಸ್ತ್ರ ಸಂಗ್ರಹಣೆಯ ಉಸ್ತುವಾರಿ ಮುಹಮ್ಮದ್ ಸಲಾಹ್ ಸೋಮವಾರ ನಡೆದ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದೆ.
ಈ ಮಧ್ಯೆ, ಈಜಿಪ್ಟ್ ಗಡಿಯ ಸನಿಹದಲ್ಲಿರುವ ರಫಾ ನಗರದ ಪೂರ್ವ, ದಕ್ಷಿಣ ಮತ್ತು ಮಧ್ಯ ಭಾಗ ಇಸ್ರೇಲ್ ಪಡೆಯ ನಿಯಂತ್ರಣಕ್ಕೆ ಬಂದಿದ್ದು ಪಶ್ಚಿಮ ಮತ್ತು ಉತ್ತರದತ್ತ ಮುನ್ನುಗ್ಗುತ್ತಿದೆ. ರವಿವಾರ ಇಸ್ರೇಲ್ ಟ್ಯಾಂಕ್ಗಳು ಮವಾಸಿಯಲ್ಲಿ ಸ್ಥಳಾಂತರಿತ ಜನರಿಗಾಗಿ ನಿರ್ಮಿಸಿರುವ ಶಿಬಿರದ ಸಮೀಪಕ್ಕೆ ತಲುಪಿದ್ದು ಜನತೆ ಆತಂಕಗೊಂಡಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.