ಗಾಝಾದಲ್ಲಿ ದೂರಸಂಪರ್ಕ ಸ್ಥಗಿತವು ಸಾಮೂಹಿಕ ದೌರ್ಜನ್ಯ ಮುಚ್ಚಿಹಾಕಬಹುದು: ಮಾನವ ಹಕ್ಕುಗಳ ನಿಗಾ ಸಂಸ್ಥೆ
Photo : PTI
ನ್ಯೂಯಾರ್ಕ್: ಫೆಲೆಸ್ತೀನಿಯನ್ ಪ್ರದೇಶಕ್ಕೆ ಇಸ್ರೇಲ್ ನ ಬಾಂಬ್ ದಾಳಿ ಮುಂದುವರಿದಿರುವಂತೆಯೇ ಗಾಝಾದಲ್ಲಿ ದೂರಸಂಪರ್ಕ ಸ್ಥಗಿತಗೊಂಡಿರುವುದು ಸಾಮೂಹಿಕ ದೌರ್ಜನ್ಯವನ್ನು ಮುಚ್ಚಿಹಾಕಬಹುದು ಎಂದು ನ್ಯೂಯಾರ್ಕ್ ಮೂಲದ ಮಾನವ ಹಕ್ಕು ನಿಗಾ ಸಂಸ್ಥೆ(ಎಚ್ಆರ್ಡಬ್ಲ್ಯೂ) ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
ಇಸ್ರೇಲ್ ನ ನಿರಂತರ ಬಾಂಬ್ ದಾಳಿಯಿಂದಾಗಿ ಶುಕ್ರವಾರ ಗಾಝಾ ಪಟ್ಟಿಯಲ್ಲಿ ಇಂಟರ್ನೆಟ್ ಸಂಪರ್ಕ ಮತ್ತು ಫೋನ್ ನೆಟ್ವರ್ಕ್ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಂಸ್ಥೆ ಈ ಎಚ್ಚರಿಕೆಯ ಸಂದೇಶ ರವಾನಿಸಿದೆ. ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ಸಂಘಟಿತ ಬಾಂಬ್ ದಾಳಿಯಿಂದಾಗಿ ಆ ಪ್ರದೇಶದಲ್ಲಿ ಅಕ್ಟೋಬರ್ 27ರಂದು ವ್ಯಾಪಕ ಫೋನ್ ಮತ್ತು ಇಂಟರ್ನೆಟ್ ಸಮಸ್ಯೆಯ ಬಳಿಕ ಸಂಪೂರ್ಣ ಸ್ಥಗಿತಗೊಂಡಿದ್ದು ಇಲ್ಲಿನ ಸುಮಾರು 2.2 ದಶಲಕ್ಷ ಜನತೆ ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿದ್ದಾರೆ. ಈ ಮಾಹಿತಿ ನಿರ್ಬಂಧವು ಸಾಮೂಹಿಕ ದೌರ್ಜನ್ಯಗಳಿಗೆ ರಕ್ಷಣೆ ನೀಡುತ್ತದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಅಪರಾಧದಿಂದ ವಿನಾಯಿತಿ ನೀಡಬಹುದು ಎಂದು ಎಚ್ಆರ್ಡಬ್ಲ್ಯೂನ ಹಿರಿಯ ಮಾನವಹಕ್ಕುಗಳ ಸಂಶೋಧಕ ಡೆಬೋರಾ ಬ್ರೌನ್ ಹೇಳಿದ್ದಾರೆ.
ಶುಕ್ರವಾರ ನೆಟ್ವರ್ಕ್ ಕಡಿತಗೊಂಡ ಬಳಿಕ ಗಾಝಾದಲ್ಲಿನ ತಮ್ಮ ಸಿಬಂದಿಗಳ ಜತೆಗಿನ ಸಂಪರ್ಕ ಕಡಿತಗೊಂಡಿರುವುದಾಗಿ ವಿಶ್ವಸಂಸ್ಥೆಯ ಮಾನವೀಯ ಏಜೆನ್ಸಿ ಒಸಿಎಚ್ಎ ಸಹಿತ ಹಲವು ಅಂತರಾಷ್ಟ್ರೀಯ ಏಜೆನ್ಸಿಗಳು ಹಾಗೂ ಎನ್ಜಿಒ ಸಂಸ್ಥೆಗಳು ಹೇಳಿವೆ. ಸಂವಹನದ ವ್ಯವಸ್ಥೆಯಿಲ್ಲದೆ, ಇಂಧನ, ಆಹಾರ, ನೀರು, ಔಷಧಗಳ ಕೊರತೆಯ ಜತೆ ವಿಶ್ವಸಂಸ್ಥೆಯ ಆಸ್ಪತ್ರೆಗಳು ಹಾಗೂ ಮಾನವೀಯ ಕಾರ್ಯಾಚರಣೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಒಸಿಎಚ್ಎ ಮಾನವೀಯ ಸಂಯೋಜಕ ಲಿನ್ ಹೇಸ್ಟಿಂಗ್ಸ್ ಹೇಳಿದ್ದಾರೆ.
ಗಾಝಾದಲ್ಲಿನ ತನ್ನ ಸಹೋದ್ಯೋಗಿಗಳ ಜತೆ ಸಂಪರ್ಕ ಕಳೆದುಕೊಂಡಿರುವುದಾಗಿ ಸರಕಾರೇತರ ಸಂಘಟನೆ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿದೆ. ಸಂವಹನ ಸ್ಥಗಿತ ಎಂದರೆ ಗಾಝಾದಲ್ಲಿನ ಫೆಲೆಸ್ತೀನಿಯನ್ ನಾಗರಿಕರ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆ, ಯುದ್ಧಾಪರಾಧಗಳ ಬಗ್ಗೆ ನಿರ್ಣಾಯಕ ಮಾಹಿತಿ ಮತ್ತು ಪುರಾವೆಗಳನ್ನು ಪಡೆಯುವುದು ಇನ್ನಷ್ಟು ಕಷ್ಟವಾಗಲಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.