ಗಾಝಾ: ಇಸ್ರೇಲ್ ದಾಳಿಯಲ್ಲಿ 4 ಮಂದಿ ಮೃತ್ಯು ; 6 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ | PC : PTI/AP
ಗಾಝಾ: ಗಾಝಾದಲ್ಲಿ ಜಾರಿಗೊಂಡಿದ್ದ ಕದನ ವಿರಾಮ ಒಪ್ಪಂದದ ಪ್ರಥಮ ಹಂತ ಶನಿವಾರ ಮುಕ್ತಾಯಗೊಂಡ ಬೆನ್ನಲ್ಲೇ ರವಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿದ್ದು ಇತರ 6 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ರವಿವಾರ ಬೆಳಗ್ಗಿನಿಂದ ಗಾಝಾದ ವಿವಿಧೆಡೆ ಇಸ್ರೇಲ್ ನಡೆಸಿದ ದಾಳಿಯ ಬಳಿಕ 4 ಮೃತದೇಹಗಳನ್ನು ಹಾಗೂ 6 ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಸ್ರೇಲ್ನ ಟ್ಯಾಂಕ್ಗಳು ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದ ಪೂರ್ವದಲ್ಲಿ ಗಡಿಭಾಗದಲ್ಲಿರುವ ಅಬಾಸನ್ ಅಲ್-ಕಬೀರಾ ಪಟ್ಟಣವನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ತೀವ್ರಗೊಳಿಸಿದೆ ಎಂದು ಹೇಳಿಕೆ ತಿಳಿಸಿದೆ.
ಗಾಝಾ ಕದನ ವಿರಾಮದ ಪ್ರಥಮ ಹಂತವನ್ನು 4 ವಾರ ವಿಸ್ತರಿಸುವ ಅಮೆರಿಕದ ಪ್ರಸ್ತಾಪವನ್ನು ಅನುಮೋದಿಸುವುದಾಗಿ ಇಸ್ರೇಲ್ ರವಿವಾರ ಹೇಳಿದೆ. ಈ ಮಧ್ಯೆ, ಗಾಝಾದಲ್ಲಿ ಯುದ್ಧ ಮರಳಿದರೆ ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯೊ ಗುಟೆರಸ್ ಎಚ್ಚರಿಕೆ ನೀಡಿದ್ದು `ಪರಿಸ್ಥಿತಿ ಹದಗೆಡುವುದನ್ನು ತಡೆಯಲು ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮತ್ತು ಶಾಶ್ವತ ಕದನ ವಿರಾಮದ ತುರ್ತು ಅಗತ್ಯವಿದೆ' ಎಂದಿದ್ದಾರೆ.