ಗಾಝಾ | ನೆರವು ಬೆಂಗಾವಲು ಪಡೆಯ ಮೇಲೆ ಇಸ್ರೇಲ್ ದಾಳಿ
ಸಾಂದರ್ಭಿಕ ಚಿತ್ರ (PTI)
ಜಿನೆವಾ : ಯುದ್ಧದಿಂದ ಜರ್ಝರಿತಗೊಂಡಿರುವ ಉತ್ತರ ಗಾಝಾಕ್ಕೆ ನೆರವು ಪೂರೈಸುತ್ತಿದ್ದ ವಾಹನಗಳ ಬೆಂಗಾವಲು ಪಡೆಯ ಮೇಲೆ ಕಳೆದ ವಾರಾಂತ್ಯ ಇಸ್ರೇಲ್ ಟ್ಯಾಂಕ್ಗಳು ಶೆಲ್ ದಾಳಿ ನಡೆಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.
ಕಳೆದ ಶನಿವಾರ ಉತ್ತರ ಗಾಝಾದಲ್ಲಿ ನೆರವು ಒದಗಿಸುತ್ತಿದ್ದ (ಕರಾವಳಿ ತೀರದ ಚೆಕ್ಪೋಸ್ಟ್ ನಲ್ಲಿ ಕ್ಲಿಯರೆನ್ಸ್ ಪಡೆದು ಮುಂದೆ ಸಾಗಿದ್ದ) ನಿಯೋಗಕ್ಕೆ ಬೆಂಗಾವಲಾಗಿದ್ದ ಪಡೆಯ ಮೇಲೆ ಇಸ್ರೇಲ್ನ ಎರಡು ಟ್ಯಾಂಕ್ಗಳು ಅತೀ ಹತ್ತಿರದಿಂದ ಗುಂಡಿನ ದಾಳಿ ನಡೆಸಿವೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಇದು ಸ್ವೀಕಾರಾರ್ಹವಲ್ಲ ಎಂದವರು ಮಂಗಳವಾರ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಭದ್ರತೆಗೆ ಅಪಾಯವಿರುವುದನ್ನು ಲೆಕ್ಕಿಸದೆ ಬೆಂಗಾವಲು ಪಡೆ ಗಾಝಾದ ಅತೀ ದೊಡ್ಡ ಆಸ್ಪತ್ರೆ ಅಲ್-ಶಿಫಾವನ್ನು ತಲುಪಲು ಮತ್ತು ತುರ್ತು ಚಿಕಿತ್ಸಾ ಕೊಠಡಿಗೆ ಸರಬರಾಜು ಮಾಡಲು ಯಶಸ್ವಿಯಾಗಿದೆ. ಉತ್ತರ ಗಾಝಾದ ಫೆಲೆಸ್ತೀನ್ ರೆಡ್ಕ್ರೆಸೆಂಟ್ ಸೊಸೈಟಿಗೆ ಕೂಡಾ ಅಗತ್ಯದ ನೆರವನ್ನು ಪೂರೈಸಲಾಗಿದೆ. ಗಾಝಾದಲ್ಲಿ ಮಾನವೀಯ ನೆರವು ಒದಗಿಸುವ ಕಾರ್ಯಕರ್ತರು ತೀವ್ರ ಅಪಾಯ ಮತ್ತು ಜೀವ- ಬೆದರಿಕೆಯ ಪರಿಸ್ಥಿತಿಯ ನಡುವೆ ನಿರ್ಣಾಯಕ ನೆರವನ್ನು ನೀಡುವುದನ್ನು ಮುಂದುವರಿಸಿದ್ದಾರೆ. ಅವರು ನೆರವಿನ ಅಗತ್ಯವಿರುವ ಹತಾಶ ಎರಡು ದಶಲಕ್ಷ ಜನರಿಗೆ ಬದುಕುಳಿಯುವ ಕೊನೆಯ ಭರವಸೆಯಾಗಿ ಉಳಿದಿದ್ದಾರೆ. ಅವರಿಗೆ ಬೇಕಿರುವುದು ಸುರಕ್ಷತೆಯ ಖಾತರಿ ಮಾತ್ರ' ಎಂದು ಘೆಬ್ರಯೇಸಸ್ ಶ್ಲಾಘಿಸಿದ್ದಾರೆ.
ಒಂದು ವಾರದ ಹಿಂದೆ ಗಾಝಾದಲ್ಲಿ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ನಡೆದ ಪೋಲಿಯೊ ಲಸಿಕೆ ಅಭಿಯಾನಕ್ಕೆ ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ವಾಹನಗಳ ಸಾಲನ್ನು ಇಸ್ರೇಲ್ ಪಡೆ ಚೆಕ್ಪೋಸ್ಟ್ ನಲ್ಲಿ ಬಂದೂಕು ತೋರಿಸಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿತ್ತು. ಇಸ್ರೇಲ್ ಪಡೆಗಳ ವರ್ತನೆ ಮತ್ತು ಧೋರಣೆ ನಮ್ಮ ಸಿಬ್ಬಂದಿಗಳ ಪ್ರಾಣಕ್ಕೆ ಅಪಾಯ ಒಡ್ಡುವ ರೀತಿಯಲ್ಲಿತ್ತು ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದರು.