ಗಾಝಾ: ಇಂಡೋನೇಶ್ಯಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ
ಫೈಲ್ ಫೋಟೊ | Photo - PTI
ಜಕಾರ್ತ : ಗಾಝಾದಲ್ಲಿನ ಇಂಡೊನೇಶ್ಯಾ ಆಸ್ಪತ್ರೆಯ ಆವರಣಕ್ಕೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನೂರಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಜಕಾರ್ತ ಮೂಲದ ‘ ಮೆಡಿಕಲ್ ಎಮರ್ಜೆನ್ಸಿ ರೆಸ್ಕ್ಯೂ ಕಮಿಟಿ’ ಎಂಬ ಎನ್ ಜಿಒ ಸಂಸ್ಥೆ ಸಂಗ್ರಹಿಸಿದ ದೇಣಿಗೆಯಿಂದ ಗಾಝಾದ ಬೆಯಿತ್ ಲಹಿಯಾದಲ್ಲಿ ಇಂಡೊನೇಶ್ಯ ಆಸ್ಪತ್ರೆ’ಯನ್ನು 2015ರಲ್ಲಿ ಆರಂಭಿಸಲಾಗಿದೆ. ಈ ಆಸ್ಪತ್ರೆಗೆ ಇಂಡೋನೇಶ್ಯಾದ ಸಿಬ್ಬಂದಿಗಳನ್ನೂ ಸಂಸ್ಥೆ ನೇಮಿಸಿದೆ. ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ಬಾಂಬ್ ದಾಳಿಯ ನಡುವೆಯೂ ಸಕ್ರಿಯವಾಗಿರುವ ಕೆಲವೇ ಆಸ್ಪತ್ರೆಗಳಲ್ಲಿ ಇದೂ ಸೇರಿದೆ. ದಾಳಿಯಿಂದಾಗಿ ಆಸ್ಪತ್ರೆಯ ಕಟ್ಟಡಕ್ಕೆ ಹಾನಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ. ಜನರನ್ನು ಆಸ್ಪತ್ರೆಯಿಂದ ತೊರೆಯುವಂತೆ ಮಾಡಲು ಇಸ್ರೇಲ್ ನಡೆಸುತ್ತಿರುವ ಭಯೋತ್ಪಾದನೆ ಇದು’ ಎಂದು ಎನ್ ಜಿಒ ಸಂಸ್ಥೆ ಹೇಳಿದೆ. ಆದರೆ ಇದನ್ನು ನಿರಾಕರಿಸಿರುವ ಇಸ್ರೇಲ್ ‘ಇಂಡೊನೇಶ್ಯ ಆಸ್ಪತ್ರೆಯನ್ನು ಹಮಾಸ್ ತನ್ನ ಅಡಗುದಾಣವಾಗಿ ಬಳಸಿಕೊಂಡಿದೆ’ ಎಂದು ಹೇಳಿದೆ.
ಆದರೆ ಇದನ್ನು ನಿರಾಕರಿಸಿರುವ ಇಂಡೊನೇಶ್ಯಾದ ವಿದೇಶಾಂಗ ಇಲಾಖೆ ‘ಈ ಆಸ್ಪತ್ರೆಯನ್ನು ಇಂಡೊನೇಶ್ಯನ್ನರು ಸಂಪೂರ್ಣವಾಗಿ ಮಾನವೀಯ ಉದ್ದೇಶಕ್ಕೆ ಮತ್ತು ಗಾಝಾದಲ್ಲಿ ಫೆಲೆಸ್ತೀನಿಯನ್ ಜನರ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ನಿರ್ಮಿಸಿದ ಸೌಲಭ್ಯವಾಗಿದೆ’ ಎಂದಿದೆ.