ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ ಗಾಝಾದಲ್ಲಿ ನರಕದ ಬಾಗಿಲು ತೆರೆಯುತ್ತದೆ: ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆದರಿಕೆ

ಬೆಂಜಮಿನ್ ನೆತನ್ಯಾಹು | PC : PTI
ಜೆರುಸಲೇಂ: ಹಮಾಸ್ ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗಡೆಗೊಳಿಸದಿದ್ದರೆ ಗಾಝಾದಲ್ಲಿ ನರಕದ ಬಾಗಿಲನ್ನು ತೆರೆಯುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಬೆದರಿಕೆ ಹಾಕಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರನ್ನು ಜೆರುಸಲೇಂನಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದ ಬಳಿಕ ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ.
ಶನಿವಾರ ಮತ್ತೆ ಮೂವರು ಒತ್ತೆಯಾಳುಗಳ ಬಿಡುಗಡೆಗೆ ನೆರವಾಗಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದ ನೆತನ್ಯಾಹು ತಮ್ಮ ದೇಶವು ಟ್ರಂಪ್ ಆಡಳಿತದೊಂದಿಗೆ ಸಂಪೂರ್ಣ ಸಹಕಾರ ಮತ್ತು ಸಮನ್ವಯದಲ್ಲಿ ಕೆಲಸ ಮಾಡುತ್ತಿದೆ. ನಾವು ಸಮಾನ ಕಾರ್ಯತಂತ್ರವನ್ನು ಹೊಂದಿದ್ದೇವೆ, ಆದರೆ ಇದರ ವಿವರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನರಕದ ಬಾಗಿಲು ಯಾವಾಗ ತೆರೆಯುತ್ತದೆ ಎಂಬ ಮಾಹಿತಿಯನ್ನು ನಾವು ಹಂಚಿಕೊಳ್ಳುವುದಿಲ್ಲ, ಆದರೆ ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗೆಗೊಳಿಸದಿದ್ದರೆ ನರಕದ ಬಾಗಿಲು ತೆರೆಯುವುದರಲ್ಲಿ ಅನುಮಾನವಿಲ್ಲ. ಹಮಾಸ್ ನ ಮಿಲಿಟರಿ ಸಾಮರ್ಥ್ಯವನ್ನು ಮತ್ತು ಗಾಝಾದಲ್ಲಿ ಅದರ ಸಂಭಾವ್ಯ ಆಡಳಿತವನ್ನು ತೊಡೆದು ಹಾಕಲಾಗುವುದು ' ಎಂದಿದ್ದಾರೆ.
ವಿವಿಧ ವಿಷಯಗಳ ಬಗ್ಗೆ ರೂಬಿಯೊ ಅವರೊಂದಿಗೆ ಅತ್ಯಂತ ಉತ್ಪಾದಕ ಚರ್ಚೆ ನಡೆಸಲಾಗಿದೆ. ಅಮೆರಿಕದ ಬೆಂಬಲದೊಂದಿಗೆ ಇರಾನ್ ವಿರುದ್ಧದ ಕೆಲಸವನ್ನು ಮುಗಿಸಿಬಿಡುವುದಾಗಿ ನೆತನ್ಯಾಹು ಹೇಳಿದ್ದಾರೆ.