ಗಾಝಾ ಖರೀದಿಗೆ, ನಿಯಂತ್ರಣಕ್ಕೆ ಬದ್ಧ: ಟ್ರಂಪ್

ಡೊನಾಲ್ಡ್ ಟ್ರಂಪ್ | PC : NDTV
ವಾಷಿಂಗ್ಟನ್: ಯುದ್ಧದಿಂದ ಜರ್ಝರಿತಗೊಂಡ ಗಾಝಾ ಪಟ್ಟಿಯಲ್ಲಿ ಅಮೆರಿಕದ ಮಾಲೀಕತ್ವ ಮತ್ತು ನಿಯಂತ್ರಣಕ್ಕೆ ಬದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಗಾಝಾದ ಮರುನಿರ್ಮಾಣ ಕಾರ್ಯದಲ್ಲಿ ಮಧ್ಯಪ್ರಾಚ್ಯದ ಇತರ ದೇಶಗಳಿಗೆ ಅವಕಾಶ ನೀಡಬಹುದು ಎಂದು ಅವರು ಹೇಳಿದ್ದಾರೆ.
ಗಾಝಾವನ್ನು ಖರೀದಿಸಲು ಮತ್ತು ಅದನ್ನು ನಿಯಂತ್ರಿಸಲು ತಾನು ಬದ್ಧ. ಇದರ ಕೆಲವು ಭಾಗಗಳ ಪುನರ್ನಿರ್ಮಾಣ ಹೊಣೆಯನ್ನು ಮಧ್ಯಪ್ರಾಚ್ಯದ ಕೆಲವು ದೇಶಗಳಿಗೆ ನೀಡಬಹುದು ಮತ್ತು ನಮ್ಮ ಮಾರ್ಗದರ್ಶನದಲ್ಲಿ ಅವರು ಕೆಲಸ ಮಾಡಬಹುದು. ಆದರೆ ಗಾಝಾವನ್ನು ನಿಯಂತ್ರಿಸಲು ಮತ್ತು ಹಮಾಸ್ ಮರಳಿ ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧವಿದ್ದೇವೆ. ಗಾಝಾ ಧ್ವಂಸಗೊಂಡ ಸ್ಥಳವಾಗಿದೆ ಮತ್ತು ಹಿಂತಿರುಗಿ ಬರಲು ಇಲ್ಲಿ ಏನೂ ಉಳಿದಿಲ್ಲ ಎಂದು ಟ್ರಂಪ್ ಸುದ್ದಿಗೋಷ್ಟಿಯಲ್ಲಿ ಪ್ರತಿಪಾದಿಸಿದ್ದಾರೆ.
ಕೆಲವು ಫೆಲೆಸ್ತೀನಿಯನ್ ನಿರಾಶ್ರಿತರಿಗೆ ಅಮೆರಿಕದಲ್ಲಿ ಅವಕಾಶ ಒದಗಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲು ತಾನು ಮುಕ್ತನಾಗಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಹೇಳಿಕೆಯನ್ನು ಖಂಡಿಸಿರುವ ಹಮಾಸ್ `ಮಾರಾಟ ಮಾಡಲು ಅಥವಾ ಖರೀದಿಸಲು ಗಾಝಾ ಯಾವುದೇ ಆಸ್ತಿಯಲ್ಲ. ಇದು ಆಕ್ರಮಣಕ್ಕೆ ಒಳಗಾಗಿರುವ ನಮ್ಮ ಫೆಲಸ್ತೀನಿಯನ್ ಪ್ರದೇಶದ ಅವಿಭಾಜ್ಯ ಅಂಗವಾಗಿದೆ. ಸ್ಥಳಾಂತರಿಸುವ ಯೋಜನೆಗಳನ್ನು ಫೆಲೆಸ್ತೀನೀಯರು ವಿಫಲಗೊಳಿಸುತ್ತಾರೆ ಎಂದು ಹೇಳಿದೆ.