ಅಸಾಮಾನ್ಯ ಮಾನವ ದುರಂತಕ್ಕೆ ಗಾಝಾ ಸಾಕ್ಷಿಯಾಗಿದೆ: ವಿಶ್ವಸಂಸ್ಥೆ ಏಜನ್ಸಿ ಕಳವಳ
Photo: PTI
ಜೆರುಸಲೇಂ: ಗಾಝಾ ಪಟ್ಟಿಯ ಮೇಲಿನ ಇಸ್ರೇಲ್ ದಾಳಿಯು ಫೆಲೆಸ್ತೀನಿಯನ್ ಪ್ರದೇಶದಲ್ಲಿ ಅಸಾಮಾನ್ಯ ಮಾನವ ದುರಂತಕ್ಕೆ ಕಾರಣವಾಗಿದೆ ಎಂದು ಫೆಲೆಸ್ತೀನಿಯನ್ ನಿರಾಶ್ರಿತರಿಗೆ ನೆರವು ಒದಗಿಸುವ ವಿಶ್ವಸಂಸ್ಥೆ ಏಜೆನ್ಸಿ (ಯುಎನ್ಆರ್ಡಬ್ಲ್ಯೂಎ) ಕಳವಳ ವ್ಯಕ್ತಪಡಿಸಿದೆ.
‘ಒಂದು ಹನಿ ನೀರೂ ಇಲ್ಲ, ಒಂದು ಕಾಳಿನಷ್ಟೂ ಗೋಧಿಯಿಲ್ಲ. ಅಡುಗೆ ಮಾಡಲು ಇಂಧನವೂ ಇಲ್ಲ. ಇದು ಗಾಝಾ ಪಟ್ಟಿಯಲ್ಲಿ ಕಳೆದ 8 ದಿನದಿಂದ ಇರುವ ಪರಿಸ್ಥಿತಿ. ನಮ್ಮ ತಂಡ ಗಾಝಾದಲ್ಲಿನ ನಿರಾಶ್ರಿತರಿಗೆ ನೆರವು ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಯುಎನ್ಆರ್ಡಬ್ಲ್ಯೂಎ ಕಮಿಷನರ್ ಜನರಲ್ ಫಿಲಿಪ್ ಲಝಾರಿನಿ ಹೇಳಿದ್ದಾರೆ.
ವಾಸ್ತವವಾಗಿ ಗಾಝಾದ ಕತ್ತನ್ನು ಹಿಸುಕಲಾಗುತ್ತಿದೆ ಮತ್ತು ಯುದ್ಧವು ಈಗ ತನ್ನ ಮಾನವೀಯತೆಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ನೀರು ಜೀವನಾಧಾರವಾಗಿದೆ. ಗಾಝಾದಲ್ಲಿ ನೀರಿನ ಕೊರತೆ ತಲೆದೋರಿದ್ದು ಗಾಝಾದ ಬದುಕು ಅಂತ್ಯಗೊಳ್ಳುತ್ತಿದೆ’ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ. ಸಂಘರ್ಷದ ಬಳಿಕ ಕಳೆದ 8 ದಿನದಲ್ಲಿ ಸುಮಾರು 1 ದಶಲಕ್ಷ ಜನತೆ ಗಾಝಾದಿಂದ ಪಲಾಯನ ಮಾಡಿದ್ದಾರೆ. ಸ್ಥಳಾಂತರ ಪ್ರಕ್ರಿಯೆ ಮುಂದುವರಿದೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ, ದಕ್ಷಿಣ ಗಾಝಾಕ್ಕೆ ನೀರಿನ ಪೂರೈಕೆಯನ್ನು ಆರಂಭಿಸಲಾಗಿದೆ ಎಂದು ಇಸ್ರೇಲ್ ನ ಇಂಧನ ಸಚಿವ ಇಸ್ರೇಲ್ ಕಾರ್ಟ್ಸ್ ಹೇಳಿದ್ದಾರೆ. ಶತ್ರುಗಳ ಪ್ರದೇಶಕ್ಕೆ ನೀರು ಪೂರೈಕೆ ಬಂದ್ ಮಾಡಲಾಗಿದೆ. ಇದರಿಂದ ಉತ್ತರ ಗಾಝಾದಿಂದ ದಕ್ಷಿಣದತ್ತ ತೆರಳುವವರ ಪ್ರಮಾಣ ದಿಢೀರನೆ ಹೆಚ್ಚಿದೆ ಎಂದವರು ಹೇಳಿದ್ದಾರೆ. ದಕ್ಷಿಣ ಗಾಝಾಕ್ಕೆ ನೀರು ಪೂರೈಕೆ ಪುನರಾರಂಭ ಆಗಿರುವುದನ್ನು ಅಲ್ಲಿನ ನಗರಪಾಲಿಕೆ ದೃಢಪಡಿಸಿದೆ.