ಗಾಝಾದಲ್ಲಿ 6 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆ

ಸಾಂದರ್ಭಿಕ ಚಿತ್ರ
ಜಿನೆವಾ: ಗಾಝಾದಲ್ಲಿ ಪೋಲಿಯೊ ಲಸಿಕೆ ಹಾಕುವ ಅಭಿಯಾನದಡಿ 6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿದ್ದು ಗಾಝಾದಲ್ಲಿ ಕದನ ವಿರಾಮ ಜಾರಿಗೊಂಡಿದ್ದು ಈ ಹಿಂದೆ ಬಾಕಿಯಾದ ಮಕ್ಕಳಿಗೆ ಲಸಿಕೆ ಹಾಕಲು ಅನುಕೂಲ ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಹೇಳಿದೆ.
20 ವರ್ಷಗಳಲ್ಲೇ ಮೊದಲ ಬಾರಿಗೆ ಗಾಝಾದಲ್ಲಿ ಪೋಲಿಯೊ ರೋಗದ ಪ್ರಕರಣ ವರದಿಯಾದ ಬಳಿಕ ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ ಎರಡು ಹಂತಗಳಲ್ಲಿ ಲಸಿಕೆ ಹಾಕುವ ಅಭಿಯಾನ ನಡೆದಿತ್ತು. ಈ ಸಂದರ್ಭ ಉದ್ದೇಶಿತ ಗುರಿಯ 95%ದಷ್ಟು ಮಕ್ಕಳಿಗೆ ಬಾಯಿಯಿಂದ ಹಾಕುವ 2 ಡೋಸ್ ಲಸಿಕೆ ಹಾಕಲಾಗಿತ್ತು. ಆದರೆ ಡಿಸೆಂಬರ್ 2024 ಮತ್ತು ಜನವರಿ 2025ರಲ್ಲಿ ಎರಡು ಸ್ಥಳಗಳಿಂದ ಸಂಗ್ರಹಿಸಲಾದ ಪರಿಸರದ ಸ್ಯಾಂಪಲ್ಗಳು ಪೋಲಿಯೊ ವೈರಸ್ ಇನ್ನೂ ಪರಿಚಲನೆಯಲ್ಲಿರುವುದನ್ನು ದೃಢಪಡಿಸಿತ್ತು. ಜನವರಿ 19ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದದ ಬಳಿಕ 10 ವರ್ಷದೊಳಗಿನ 5,91,000 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಇರಿಸಿಕೊಳ್ಳಲಾಗಿತ್ತು. ಐದು ದಿನಗಳ ಅಭಿಯಾನ ಬುಧವಾರ ಮುಕ್ತಾಯಗೊಂಡಿದ್ದು 6,02,795 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.