ಇಸ್ರೇಲಿನ ವಾಯುದಾಳಿಯಿಂದ ನಾಶವಾದ ಗಾಝಾದ ರಿಮಲ್ ಪ್ರದೇಶ
ಚಿತ್ರಗಳಲ್ಲಿ ನೋಡಿ…
Photo: [Abdelhakim Abu Riash/Al Jazeera]
ಇಸ್ರೇಲ್ ಮಾಡುತ್ತಿರುವ ಬಾಂಬ್ ದಾಳಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ತೀವ್ರವಾದುದು ಎಂದು ರಿಮಲ್ ಪ್ರದೇಶದ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ. ಗಾಝಾ ಪಟ್ಟಿಯ ಹೃದಯ ಭಾಗವಾಗಿದ್ದ ರಿಮಲ್ ಪ್ರದೇಶ ಈಗಾಗಲೇ ನಾಲ್ಕು ದಿನಗಳ ಬಾಂಬ್ ದಾಳಿಯಲ್ಲಿ ಬಹುತೇಕ ನಾಶವಾಗಿದೆ.
ಇಸ್ರೇಲಿ ಬಾಂಬ್ಗಳಿಗೆ ಅಪಾರ್ಟ್ಮೆಂಟ್ ಗಳ ಗೋಡೆಗಳು ನೆಲಸಮವಾಗಿದೆ. ಮರಗಳು ಉರುಳಿ ಬಿದ್ದಿವೆ. ಉದ್ಯಮಿಗಳು ಮತ್ತು ಆಹಾರ ಮಾರಾಟಗಾರರಿಂದ ಕೂಡಿದ ಬೀದಿಗಳೆಲ್ಲವೂ ನಾಶವಾಗಿದೆ. ಗಾಝಾದ ಮುಖ್ಯ ದೂರಸಂಪರ್ಕ ಕಂಪನಿಯಿಂದ ಅಂತರರಾಷ್ಟ್ರೀಯ ಮಾಧ್ಯಮದವರೆಗೆ ವಿಶ್ವವಿದ್ಯಾಲಯದ ಕಟ್ಟಡಗಳು, ಮಸೀದಿಗಳು ಮತ್ತು ಕಚೇರಿಗಳು ನೆಲಸಮವಾಗಿದೆ.
"ಇಸ್ರೇಲ್ ಎಲ್ಲವನ್ನೂ ನಾಶಪಡಿಸಿದೆ" ಎಂದು ಫೆಲೆಸ್ತೀನಿನ ಉದ್ಯಮಿ ಅಲಿ ಅಲ್-ಹಿಯಾಕ್ ರಿಮಲ್ ಬಳಿಯ ತನ್ನ ಮನೆಯಿಂದ ಹೇಳಿದರು. "ಇದು ನಮ್ಮ ಸಮುದಾಯದ ಸಾರ್ವಜನಿಕ ಜೀವನದ ನರ ನಾಡಿಯ ಸ್ಥಳ. ಈಗ ಅವರು ನಮ್ಮನ್ನು ಒಡೆಯುತ್ತಿದ್ದಾರೆ" ಎಂದು ಅವರು ಗಾಝಾದ ಮೇಲೆ ಇಸ್ರೇಲ್ ಆಕ್ರಮಣವನ್ನು ಉಲ್ಲೇಖಿಸಿ ಸ್ಮರಿಸಿಕೊಂಡರು.
ಹಮಾಸ್ ಶನಿವಾರ ಇಸ್ರೇಲ್ನ ಮೇಲೆ ದಶಕಗಳಲ್ಲಿ ತನ್ನ ಮಾರಣಾಂತಿಕ ದಾಳಿಯನ್ನು ನಡೆಸಿತು. ಬಳಿಕ, ಮಂಗಳವಾರ ಇಸ್ರೇಲ್ ಗಾಝಾದ ಮೇಲೆ ನಡೆಸಿದ ಭಾರೀ ಬಾಂಬ್ ದಾಳಿಯು ಅತ್ಯಂತ ತೀವ್ರವಾದ ಬಾಂಬ್ ದಾಳಿಯಾಗಿತ್ತು ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.
ಇಸ್ರೇಲ್ ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಇಸ್ರೇಲಿ ಬಾಂಬ್ಗಳ ದಾಳಿಯಲ್ಲಿ ತತ್ತರಿಸುತ್ತಿರುವ ಪ್ರದೇಶವಾದ ಗಾಝಾದಲ್ಲಿ ನೆಲದ ಆಕ್ರಮಣವನ್ನು ಪ್ರಾರಂಭಿಸುವ ಹೇಳಿಕೆ ನೀಡಿದ್ದಾರೆ. ಐದು ದಿನಗಳ ಸಂಘರ್ಷದಲ್ಲಿ ಕನಿಷ್ಠ 900 ಜನರು ಸಾವನ್ನಪ್ಪಿದ್ದಾರೆ ಮತ್ತು 4,600 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಮಧ್ಯೆ ಇಸ್ರೇಲ್ ನಲ್ಲಿ ಸಾವಿನ ಸಂಖ್ಯೆ 1,200 ಕ್ಕೆ ಏರಿದೆ ಮತ್ತು 2,700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ನ ಮಿಲಿಟರಿ ಹೇಳಿದೆ.
"ಈ ಶಬ್ದಗಳು ವಿಭಿನ್ನವಾಗಿವೆ. ಇದು ಪ್ರತೀಕಾರದ ಧ್ವನಿ." ಎಂದು ಗಾಝಾ ನಗರದ ಉತ್ತರದ ನೆರೆಹೊರೆಯ ನಿವಾಸಿ ಸಮನ್ ಅಶೌರ್ ರಿಮಾಲ್ನ ಸ್ಫೋಟಗಳ ಸದ್ದು ಆಲಿಸುತ್ತಾ ಹೇಳಿದರು.
ಈಗ ನಡೆಯುತ್ತಿರುವ ಬಾಂಬ್ ದಾಳಿಯಲ್ಲಿ ಸ್ಥಳೀಯ ಪತ್ರಕರ್ತರಿಂದ ಹಿಡಿದು ಅಂಗಡಿಯ ವ್ಯಾಪಾರಿಗಳವರೆಗೆ ಎಲ್ಲ ವರ್ಗದ ಜನರು ಮೃತಪಟ್ಟಿದ್ದಾರೆ.
ಗಾಝಾ ನಿವಾಸಿ ಇಸ್ಸಾ ಅಬು ಸಲೀಂ ತನ್ನ ಮನೆಯಲ್ಲಿ ಉಳಿದಿರುವ ಅವಶೇಷಗಳನ್ನು, ಧೂಳಿನಿಂದ ತುಂಬಿದ ಕೊಳೆತ ಬಟ್ಟೆಗಳನ್ನು ಪರೀಕ್ಷಿಸುತ್ತಾ ದಿಗ್ಭ್ರಮೆಗೊಂಡರು. “ಉಳಿಸಿದ್ದ ಹಣ ಹೋಗಿದೆ. ನನ್ನ ಗುರುತಿನ ಚೀಟಿಗಳು ಕಳೆದುಹೋಗಿವೆ. ನಾಲ್ಕು ಮಹಡಿಯ ಇಡೀ ಮನೆ ನಾಶವಾಗಿದೆ. ಅತ್ಯಂತ ಸುಂದರವಾದ ಪ್ರದೇಶವನ್ನು ಅವರು ನಾಶಪಡಿಸಿದರು” ಎಂದಾಗ ಅವರ ಕಣ್ಣಂಚು ಭಾರವಾಗಿತ್ತು.
ಕೃಪೆ : Aljazeera.com