ಮುಂದಿನ ವರ್ಷಾಂತ್ಯಕ್ಕೆ ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ
ಮುಹಮ್ಮದ್ ಯೂನುಸ್ | PC : PTI
ಢಾಕ: ಮುಂದಿನ ವರ್ಷಾಂತ್ಯಕ್ಕೆ ಅಥವಾ 2026ರ ಆರಂಭದಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಸೋಮವಾರ ಹೇಳಿದ್ದಾರೆ.
ಬಾಂಗ್ಲಾದೇಶ ವಿಮೋಚನಾ ಯುದ್ಧದ 53ನೇ ವಾರ್ಷಿಕ ದಿನಾಚರಣೆ ಸಂದರ್ಭ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿಯ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು `ಚುನಾವಣಾ ಪ್ರಕ್ರಿಯೆಗಳು ಮತ್ತು ಚುನಾವಣಾ ಸುಧಾರಣಾ ಆಯೋಗದ ಶಿಫಾರಸುಗಳ ಹಿನ್ನೆಲೆಯಲ್ಲಿ ಮತ್ತು ರಾಷ್ಟ್ರೀಯ ಒಮ್ಮತದ ಆಧಾರದಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆಗೆ ಇನ್ನೂ ಕನಿಷ್ಟ 6 ತಿಂಗಳು ಬೇಕಾಗುತ್ತದೆ. ಆದ್ದರಿಂದ 2025ರ ಅಂತ್ಯ ಅಥವಾ 2026ರ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಿರೀಕ್ಷಿಸಬಹುದಾಗಿದೆ' ಎಂದು ಯೂನುಸ್ ಹೇಳಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಹಂತವಾಗಿರುವ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ವಿಸ್ತೃತ ಕಾರ್ಯ ಮಾಡಬೇಕಿದೆ. ಕಳೆದ 15 ವರ್ಷಗಳಿಂದ ಮತದಾರರ ಪಟ್ಟಿ ಪರಿಷ್ಕರಣೆಗೊಂಡಿಲ್ಲ. ಈ ಹಿಂದಿನ ಮೂರು ಚುನಾವಣೆಗಳಲ್ಲಿ ಮತದಾರರು `ಪಾಲ್ಗೊಂಡಿರದ' ಕಾರಣ ಪರಿಷ್ಕರಣೆ ಕಾರ್ಯ ಅತ್ಯಂತ ಸವಾಲಿನದ್ದಾಗಿದೆ. ಮುಂದಿನ ಸರಕಾರವನ್ನು ರಚಿಸುವ ಜವಾಬ್ದಾರಿ ಈಗ ಚುನಾವಣಾ ಆಯೋಗದ ಮೇಲಿದೆ. ಚುನಾವಣೆಗೂ ಮುನ್ನ ಸುಧಾರಣೆಯ ಅಗತ್ಯವಿದೆ ಎಂಬುದು ತನ್ನ ಅಭಿಮತ. ಆದರೆ ಕನಿಷ್ಟ ಸುಧಾರಣೆಯೊಂದಿಗೆ ಚುನಾವಣೆ ನಡೆಸಲು ಎಲ್ಲಾ ಪಕ್ಷಗಳೂ ಸಹಮತಕ್ಕೆ ಬಂದರೆ ಮುಂದಿನ ವರ್ಷದ ನವೆಂಬರ್ ಅಂತ್ಯದೊಳಗೆ ಸಾರ್ವತ್ರಿಕ ಚುನಾವಣೆ ಸಾಧ್ಯ ಎಂದವರು ಹೇಳಿದ್ದಾರೆ.