ಸಿಂಗಾಪುರ ಏರ್ ಲೈನ್ಸ್ ವಿಮಾನದಲ್ಲಿ ಕೊನೆಯುಸಿರೆಳೆದ ಬ್ರಿಟಿಷ್ ರಂಗಕರ್ಮಿ ಜೋಫ್ರೆ ಕಿಚೆನ್!

PC: X/OliLondonTV
ಹೊಸದಿಲ್ಲಿ: ತೀವ್ರ ಪ್ರಕ್ಷುಬ್ಧತೆ ಕಾರಣದಿಂದ ತುರ್ತು ಭೂಸ್ಪರ್ಶ ಮಾಡಿದ ಸಿಂಗಾಪುರ ಏರ್ಲೈನ್ಸ್ ವಿಮಾನದಲ್ಲಿ ಮೃತಪಟ್ಟ ಪ್ರಯಾಣಿಕ ಹಿರಿಯ ಬ್ರಿಟಿಷ್ ರಂಗಕರ್ಮಿ ಜೋಫ್ರೆ ಕಿಚೆನ್ ಎನ್ನುವ ಅಂಶ ಇದೀಗ ಬಹಿರಂಗವಾಗಿದೆ.
ನಿವೃತ್ತ ವಿಮಾ ಅಧಿಕಾರಿಯಾಗಿದ್ದ ಜೋಫ್ರೆ ಹವ್ಯಾಸಿ ರಂಗಕರ್ಮಿಯಾಗಿ ಗುರುತಿಸಿಕೊಂಡಿದ್ದರು. ಹೀಥ್ರೋದಿಂದ ಸಿಂಗಾಪುರಕ್ಕೆ ರಾತ್ರಿ 10 ಗಂಟೆಯ ವಿಮಾನದಲ್ಲಿ ಹೊರಟಿದ್ದಾಗ ಈ ದುರಂತ ಸಂಭವಿಸಿದೆ. ಈ ಬಗ್ಗೆ ಗಾರ್ಡಿಯನ್ ವರದಿ ಪ್ರಕಟಿಸಿದ್ದು, ವಿಮಾನದಲ್ಲಿ ಇವರ ಪಕ್ಕ ಆಸೀನರಾಗಿದ್ದ ಪ್ರಯಾಣಿಕರು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. ಜೋಫ್ರೆ ಹಾಗೂ ಪತ್ನಿ ಲಿಂಡಾ, ಆಸ್ಟ್ರೇಲಿಯಾಗೆ ಆರು ವಾರಗಳ ವಿಹಾರಕ್ಕಾಗಿ ಸಿಂಗಾಪುರ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮೂಲತಃ ಇಂಗ್ಲೆಂಡ್ ನ ಬ್ರಿಸ್ಟಾಲ್ ನವರಾದ ಕಿಚೆನ್, ತಮ್ಮ ಬದುಕಿನ ಬಹಳಷ್ಟು ಅವಧಿಯನ್ನು ಗ್ಲೋಸ್ಟರ್ ಶೈರ್ ನ ಥೋರ್ನ್ ಬರಿಯಲ್ಲಿ ಕಳೆದಿದ್ದರು. ಇವರಿಗೆ ಮಗ ಮತ್ತು ಮಗಳು ಇದ್ದಾರೆ. "ಅವರು ಪ್ರೀತಿಪಾತ್ರ ವ್ಯಕ್ತಿಯಾಗಿದ್ದರು. ಜಾಣ್ಮೆಯ, ಹಾಸ್ಯಭರಿತ, ಅದ್ಭುತ ನಟ. ರಂಗಭೂಮಿ ಬಗ್ಗೆ ಆಳವಾದ ಕಾಳಜಿ ಹೊಂದಿದ್ದರು. ಅದು ಅವರ ಪ್ರೀತಿ' ಎಂದು ಅವರ ಆಪ್ತಸ್ನೇಹಿತ ಜಿಲ್ ಡೈಮಂಡ್ ಪ್ರತಿಕ್ರಿಯಿಸಿದ್ದಾರೆ.
ವೃತ್ತಿಯಿಂದ ನಿವೃತ್ತಿಯಾದ ಬಳಿಕ ಕಿಚೆನ್, ಥೋರ್ನ್ ಬರಿ ಮ್ಯೂಸಿಕಲ್ ಥಿಯೇಟರ್ ಗ್ರೂಪ್ ಎಂಬ ತಂಡವನ್ನು ಕಟ್ಟಿಕೊಂಡು, ರಂಗಸಂಚಾರ ಮಾಡುತ್ತಿದ್ದರು. ಕಳೆದ ಕ್ರಿಸ್ಮಸ್ ನಲ್ಲಿ ಡಿಕ್ ವಿಟ್ಟಿಂಗ್ಟನ್ ಪ್ಯಾಂಟೊಮೈಮ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.