ವಿಶ್ವಾಸಮತದಲ್ಲಿ ಚಾನ್ಸಲರ್ ಶೋಲ್ಝ್ ಗೆ ಸೋಲು; ಅವಧಿಪೂರ್ವ ಚುನಾವಣೆಯತ್ತ ಜರ್ಮನಿ
PC: X/@OlafScholz
ಬರ್ಲಿನ್: ಜರ್ಮನ್ ಸಂಸತ್ನಲ್ಲಿ ಸೋಮವಾರ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಜರ್ಮನ್ ಪ್ರಧಾನಿ ಒಲಾಫ್ ಶೋಲ್ಝ್ ಅವರು ಪರಾಭವಗೊಂಡಿದ್ದಾರೆ. ಇದರಿಂದಾಗಿ ಯುರೋಪ್ ಒಕ್ಕೂಟದಲ್ಲಿ ಅತ್ಯಧಿಕ ಜನಸಂಖ್ಯೆಯ ಹಾಗೂ ಬೃಹತ್ ಆರ್ಥಿಕತೆಯ ರಾಷ್ಟ್ರವಾದ ಜರ್ಮನಿಯು ಫೆಬ್ರವರಿಯಲ್ಲಿ ಅವಧಿಪೂರ್ವ ಚುನಾವಣೆಯನ್ನು ಎದುರಿಸಬೇಕಾಗಿದೆ. 733 ಸದಸ್ಯ ಬಲದ ಬುಂಡೆಸ್ಟಾಗ್( ಜರ್ಮನ್ ಸಂಸತ್ನ ಕೆಳಮನೆ )ನಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಶೋಲ್ಝ್ ಅವರನ್ನು 207 ಸಂಸದರು ಬೆಂಬಲಿಸಿದರೆ, 394 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು ಹಾಗೂ 116 ಮಂದಿ ಗೈರುಹಾಜರಾಗಿದ್ದರು. ಇದರಿಂದಾಗಿ ಶೋಲ್ ಅವರು ಬಹುಮತಕ್ಕೆ ಅಗತ್ಯವಿದ್ದ 367 ಮತಗಳನ್ನು ಪಡೆಯುವಲ್ಲಿ ವಿಫಲರಾದರು.
ಶೋಲ್ಝ್ ನೇತೃತ್ವದ ತ್ರಿಪಕ್ಷಗಳ ಮೈತ್ರಿಕೂಟವು ಸಂಸತ್ನಲ್ಲಿ ಅಲ್ಪಬಹುಮತವನ್ನು ಹೊಂದಿತ್ತು. ನವೆಂಬರ್ 6ರಂದು ಶೋಲ್ಝ್ ಅವರು ತನ್ನ ಸಂಪುಟದ ವಿತ್ತ ಸಚಿವರನ್ನು ವಜಾಗೊಳಿಸಿದ ಬಳಿಕ ಜರ್ಮನಿಯ ಜಡ್ಡುಗಟ್ಟಿದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಕುರಿತು ಉದ್ಭವಿಸಿದ ವಿವಾದಕ್ಕೆ ಸಂಬಂಧಿಸಿ ಅವರು ವಿತ್ತ ಸಚಿವರನ್ನು ವಜಾಗೊಳಿಸಿದ ಬಳಿಕ ಮೈತ್ರಿ ಸರಕಾರ ಪತನಗೊಂಡಿತ್ತು. ಯೋಜಿತ ಚುನಾವಣಾ ದಿನಾಂಕಕ್ಕೆ ಏಳು ತಿಂಗಳು ಮೊದಲು, ಫೆಬ್ರವರಿ 23ರಂದು ಸಂಸದೀಯ ಚುನಾವಣೆಯನ್ನು ನಡೆಸಲು ಹಲವಾರು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದರು.
ಎರಡನೇ ವಿಶ್ವಮಹಾಯುದ್ಧದ ಆನಂತರ ಜರ್ಮನಿಯ ಸಂಸತ್ನ ಕೆಳಮನೆಯಾದ ಬುಂಡೆಸ್ಟಾಗ್ ಅನ್ನು ವಿಸರ್ಜನೆಗೊಳಿಸುವುದಕ್ಕೆ ಸಂವಿಧಾನವು ಅನುಮತಿ ನೀಡುವುದಿಲ್ಲವಾದ್ದರಿಂದ ಶೋಲ್ಝ್ ಅವರು ವಿಶ್ವಾಸಮತ ಯಾಚನೆ ಮಾಡುವುದು ಅನಿವಾರ್ಯವಾಗಿತ್ತು. ಇದೀಗ ವಿಶ್ವಾಸಮತ ಯಾಚನೆಯಲ್ಲಿ ಶೋಲ್ಝ್ ಸರಕಾರ ಪರಾಭವಗೊಳ್ಳುವುದರೊಂದಿಗೆ ಸಂಸತ್ತನ್ನು ವಿಸರ್ಜಿಸಬೇಕೇ ಅಥವಾ ಚುನಾವಣೆಯನ್ನು ನಡೆಸಬೇಕೇ ಎಂಬುದನ್ನು ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೆಯಿನ್ಮಿಯರ್ ಅವರು ನಿರ್ಧರಿಸಬೇಕಾಗುತ್ತದೆ.
ಶೋಲ್ಝ್ ನೇತ್ತೃತ್ವದ ಸರಕಾರದ ಅಳಿವುಉಳಿವಿನ ಕುರಿತು ಸ್ಟೆಯಿನ್ಮಿಯರ್ ಅವರು 21 ದಿನಗಳೊಳಗೆ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ನೂತನ ಚುನಾವಣಾ ದಿನಾಂಕವು ಕ್ರಿಸ್ಮಸ್ ಬಳಿಕ ಘೋಷಣೆಯಾಗುವ ನಿರೀಕ್ಷೆಯಿದೆ. ಒಮ್ಮೆ ಸಂಸತ್ ವಿಸರ್ಜನೆಯಾದಲ್ಲಿ 60 ದಿನಗಳೊಳಗೆ ಚುನಾವಣೆಯನ್ನು ನಡೆಸಬೇಕಾಗುತ್ತದೆ