ಸಿರಿಯಾ ನಿರಾಶ್ರಿತರ ಗಡಿಪಾರಿಗೆ ಜರ್ಮನಿ, ಫ್ರಾನ್ಸ್ ನಿರ್ಧಾರ?
pc : aljazeera.com
ಬರ್ಲಿನ್ : ತಮ್ಮಲ್ಲಿ ಆಶ್ರಯ ಕೋರಿ ಸಲ್ಲಿಸಿರುವ ಅರ್ಜಿಗಳ ಪೈಕಿ ಇತ್ಯರ್ಥವಾಗದೆ ಉಳಿದಿರುವ ಸಿರಿಯಾ ಪ್ರಜೆಗಳ ಅರ್ಜಿಗಳನ್ನು ಸ್ತಂಭನಗೊಳಿಸಲು ಜರ್ಮನಿ, ಫ್ರಾನ್ಸ್, ಆಸ್ಟ್ರಿಯ ಮತ್ತಿತರ ಹಲವು ಯುರೋಪಿಯನ್ ರಾಷ್ಟ್ರಗಳು ನಿರ್ಧರಿಸಿವೆ.
ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಸರಕಾರ ಪದಚ್ಯುತಗೊಂಡ ಮರುದಿನವೇ ಅವು ಈ ನಿರ್ಧಾರವನ್ನು ಕೈಗೊಂಡಿವೆ.
ಯುದ್ಧಗ್ರಸ್ತ ಸಿರಿಯಾದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳ ಬಗ್ಗೆ ಜರ್ಮನಿ ಮತ್ತಿತರ ಯುರೋಪಿಯನ್ ದೇಶಗಳ ಸರಾರಗಳು ನಿಕಟವಾದ ನಿಗಾವಿರಿಸಿವೆ. ಶೀಘ್ರದಲ್ಲೇ ತಾನು ಸಿರಿಯಾ ನಿರಾಶ್ರಿತರ ಅವರ ತಾಯ್ನಾಡಿಗೆ ಗಡಿಪಾರು ಮಾಡುವುದಾಗಿ ತಿಳಿಸಿದೆ.
ಸಿರಿಯ ಪ್ರಜೆಗಳನ್ನು ಗಡಿಪಾರು ಮಾಡುವಂತೆ ಜರ್ಮನಿ ಸೇರಿದಂತೆ ಯುರೋಪ್ನ ಬಲಪಂಥೀಯ ರಾಜಕಾರಣಿಗಳು ಆಳುವ ಸರಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಸಿರಿಯಾ ನಿರಾಶ್ರಿತರ ಅತಿ ಹೆಚ್ಚು ಸಂಖ್ಯೆಯ ಮಂದಿ ಜರ್ಮನಿಯಲ್ಲಿ ವಾಸವಾಗಿದ್ದಾರೆ.
ಆದರೆ ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು ಸೋಮವಾರ ಹೇಳಿಕೆಯೊಂದನ್ನು ನೀಡಿ, ಅಸ್ಸಾದ್ ಆಡಳಿತವು ಕೊನೆಗೊಂಡಿದ್ದರೂ, ಆ ದೇಶದಲ್ಲಿ ಭವಿಷ್ಯದಲ್ಲಿ ಶಾಂತಿಯುತ ಬೆಳವಣಿಗೆಗಳು ನಡೆಯಲಿವೆ ಎಂಬ ಬಗ್ಗೆ ಯಾವುದೇ ಖಾತರಿಯಿಲ್ಲವೆಂದು ಹೇಳಿದ್ದಾರೆ.
ಜರ್ಮನಿಯಲ್ಲಿ ಸುಮಾರು 10 ಲಕ್ಷ ಸಿರಿಯನ್ ನಿರಾಶ್ರಿತರು ನೆಲೆಸಿದ್ದಾರೆ. ಅವರಲ್ಲಿ ಬಹುತೇಕ ಮಂದಿ 2015-16ರ ನಡುವೆ ಮಾಜಿ ಚಾನ್ಸಲರ್ ಆ್ಯಂಜೆಲಾ ಮಾರ್ಕೆಲ್ ಅವರ ಅಧಿಕಾರವಧಿಯಲ್ಲಿ ಆಗಮಿಸಿದವರಾಗಿದ್ದಾರೆ.