ಗಾಝಾ ಆಸ್ಪತ್ರೆ ಮೇಲಿನ ದಾಳಿಗೆ ಜಾಗತಿಕ ನಾಯಕರ ಖಂಡನೆ
Photo: PTI
ಹೊಸದಿಲ್ಲಿ: ಕನಿಷ್ಠ 500 ಜನರ ಸಾವಿಗೆ ಕಾರಣವಾದ ಗಾಝಾ ಆಸ್ಪತ್ರೆಯ ಮೇಲಿನ ವಾಯು ದಾಳಿ ಜಗತ್ತಿನಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಈ ದಾಳಿಗೆ ಇಸ್ರೇಲ್ ಕಾರಣ ಎಂದು ಹಮಾಸ್ ಹೇಳಿದರೆ, ಹಮಾಸ್ ಮಿತ್ರರ ಗುಂಪು ಉಡಾಯಿಸಿದ ರಾಕೆಟ್ ತಪ್ಪಿ ಆಸ್ಪತ್ರೆಗೆ ಬಿದ್ದಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಹಮಾಸ್ ದಾಳಿಯ ನಂತರ ಗಾಝಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿದಾಗಿನಿಂದ ಇದು ಅತ್ಯಂತ ಹೆಚ್ಚು ಜನರನ್ನು ಬಲಿ ಪಡೆದ ದಾಳಿಯಾಗಿದೆ.
ಈಗಾಗಲೇ ಇಸ್ರೇಲ್ ನತ್ತ ಪ್ರಯಾಣ ಬೆಳೆಸಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ತಾವು ಈ ದಾಳಿಯಿಂದ ಆಕ್ರೋಶಗೊಂಡಿರುವುದಾಗಿ ಹಾಗೂ ಜೊತೆಗೆ ತೀವ್ರ ದುಃಖಿತರಾಗಿರುವುದಾಗಿ ತಿಳಿಸಿದ್ದಾರೆ.
ಈ ದಾಳಿಯ ಬೆನ್ನಲ್ಲೇ ಟರ್ಕಿ ಮತ್ತು ಜೋರ್ಡಾನ್ನಲ್ಲಿರುವ ಇಸ್ರೇಲಿ ದೂತಾವಾಸ ಕಚೇರಿಗಳ ಮುಂದೆ ಹಾಗೂ ಲೆಬನಾನ್ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆಗಳು ನಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಈ ದಾಳಿಗೆ ಪ್ರತಿಕ್ರಿಯಿಸಿ “ಐಡಿಎಫ್ ದಾಳಿ ನಡೆಸಿಲ್ಲ. ನಮ್ಮ ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದವರು ತಮ್ಮ ಸ್ವಂತ ಮಕ್ಕಳನ್ನೂ ಕೊಲೆಗೈಯ್ಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ದಾಳಿಯ ಹಿನ್ನೆಲೆಯಲ್ಲಿ ಬುಧವಾರ ಒಂದು ದಿನದ ಶೋಕಾಚರಣೆ ಘೋಷಿಸಿದ್ದಾರೆ. ಈ ದಾಳಿಯು ಇಸ್ರೇಲ್ ಮತ್ತು ಅದರ ಮಿತ್ರ ದೇಶವಾದ ಅಮೆರಿಕಾದ ವಿರುದ್ಧ ತಿರುಗಿ ಬೀಳಲಿದೆ ಎಂದು ಅವರು ಹೇಳಿದ್ದಾರೆ.
“ಅಮೆರಿಕಾ-ಇಸ್ರೇಲಿ ಬಾಂಬುಗಳ ಬೆಂಕಿ ಇಂದು ಸಂಜೆ ಗಾಯಾಳು ಫೆಲೆಸ್ತೀನೀಯರಿರುವ ಗಾಝಾ ಆಸ್ಪತ್ರೆಯ ಮೇಲೆ ಬಿದ್ದಿದೆ. ಇದು ಶೀಘ್ರ ಝಿಯೋನಿಸ್ಟರನ್ನು ಆಹುತಿ ಪಡೆಯಲಿದೆ,” ಎಂದು ರೈಸಿ ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಪ್ರತಿಕ್ರಿಯಿಸಿ ಆಸ್ಪತ್ರೆಯ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.
ಯುರೋಪಿಯನ್ ಯೂನಿಯನ್ ಮುಖ್ಯಸ್ಥ ಚಾರ್ಲ್ಸ್ ಮೈಕೇಲ್ ಮಾತನಾಡಿ “ನಾಗರಿಕ ಮೂಲಭೂತ ಸೌಕರ್ಯದ ಮೇಲಿನ ದಾಳಿ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ,” ಎಂದು ಹೇಳಿದ್ದಾರೆ.
ಸಿರಿಯಾ ಈ ದಾಳಿಗೆ ಪಾಶ್ಚಿಮಾತ್ಯ ದೇಶಗಳು, ಪ್ರಮುಖವಾಗಿ ಅಮೆರಿಕಾವನ್ನು ಹೊಣೆಗಾರನನ್ನಾಗಿಸಿದೆ.
ಈ ದಾಳಿಯಿಂದಾಗಿ ಇಸ್ರೇಲ್ ಯುದ್ಧಾಪರಾಧವೆಸಗಿದೆ ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಮೌಸ್ಸಾ ಫಕಿ ಮಹಮತ್ ಹೇಳಿದ್ದಾರೆ.
ಈ ಗಂಭೀರ ಘಟನೆಗೆ ಇಸ್ರೇಲ್ ಹೊಣೆ ಹೊತ್ತುಕೊಳ್ಳಬೇಕು ಎಂದು ಜೋರ್ಡಾನ್ ವಿದೇಶಾಂಗ ಸಚಿವಾಲಯ ಹೇಳಿದೆ.
ಗಾಝಾ ಆಸ್ಪತ್ರೆ ದಾಳಿ ಒಂದು ಬರ್ಬರ ನರಮೇಧ ಎಂದು ಖತರ್ ವಿದೇಶಾಂಗ ಸಚಿವಾಲಯ ಹೇಳಿದೆ.
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗನ್ ಪ್ರತಿಕ್ರಿಯಿಸಿ “ಮಾನವೀಯ ಮೌಲ್ಯಗಳಿಗೆ ಬೆಲೆ ನೀಡದೆ ಇಸ್ರೇಲ್ ದಾಳಿ ನಡೆಸಿದೆ, ಇಂತಹ ದಾಳಿಗಳನ್ನು ನಿಲ್ಲಿಸಬೇಕು,” ಎಂದು ಹೇಳಿದ್ದಾರೆ.
ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರಾದ ವೋಕರ್ ಟರ್ಕ್ ಮಾತನಾಡಿ ಈ ದಾಳಿ ಅಸ್ವೀಕಾರಾರ್ಹ, ಅದಕ್ಕೆ ಕಾರಣರಾದವರು ಶಿಕ್ಷೆಗೊಳಗಾಗಬೇಕು ಎಂದಿದ್ದಾರೆ. ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರ್ರೆಸ್ ಮಾತನಾಡಿ, ಈ ದಾಳಿಯಿಂದ ತಮಗೆ ಆಘಾತವಾಗಿದೆ ಎಂದಿದ್ದಾರೆ.