ಗಾಝಾ ಯುದ್ಧದಿಂದ ಜಾಗತಿಕ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ
Photo- PTI
ಜಿನೆವಾ: ಗಾಝಾದಲ್ಲಿ ನಡೆಯುತ್ತಿರುವ ಸಂಘರ್ಷ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಅಪಾಯವಾಗಲಿದೆ. ಅಲ್ಲಿ ತಕ್ಷಣವೇ ಮಾನವೀಯ ಕದನ ವಿರಾಮ ಜಾರಿಗೊಳ್ಳುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಎಚ್ಚರಿಕೆ ನೀಡಿದ್ದಾರೆ.
ಗಾಝಾದಲ್ಲಿ ಕದನ ವಿರಾಮದ ಅಗತ್ಯದ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿರುವ ಗುಟೆರಸ್ `ಪ್ರಧಾನ ಕಾರ್ಯದರ್ಶಿಯಾಗಿ ನನ್ನ ಅಧಿಕಾರಾವಧಿಯಲ್ಲಿ ಪ್ರಥಮ ಬಾರಿಗೆ ವಿಶ್ವಸಂಸ್ಥೆ ಚಾರ್ಟರ್ನ ಆರ್ಟಿಕಲ್ 99ರನ್ನು ಉಲ್ಲೇಖಿಸುತ್ತಿದ್ದೇನೆ. ಗಾಝಾದಲ್ಲಿ ಮಾನವೀಯ ವ್ಯವಸ್ಥೆ ಕುಸಿದುಬೀಳುವ ತೀವ್ರ ಅಪಾಯ ಎದುರಾಗಿರುವುದರಿಂದ ಮಾನವೀಯ ದುರಂತವನ್ನು ತಪ್ಪಿಸಲು ಸಹಾಯ ಮಾಡುವಂತೆ ಭದ್ರತಾ ಮಂಡಳಿಯನ್ನು ಆಗ್ರಹಿಸುತ್ತೇನೆ ಮತ್ತು ಮಾನವೀಯ ಕದನ ವಿರಾಮ ಘೋಷಣೆಯಾಗಬೇಕೆಂದು ಒತ್ತಾಯಿಸುತ್ತೇನೆ. ಗಾಝಾ ಸಂಘರ್ಷ ಮುಂದುವರಿದರೆ ಫೆಲೆಸ್ತೀನೀಯರ ಮೇಲೆ ಮತ್ತು ಪ್ರಾದೇಶಿಕ ಭದ್ರತೆಯ ಮೇಲೆ ಘೋರ ಪರಿಣಾಮ ಬೀರಲಿದೆ' ಎಂದು ಹೇಳಿದ್ದಾರೆ.
ಭದ್ರತಾ ಮಂಡಳಿಗೆ ಪತ್ರ ರವಾನಿಸುವ ಮೂಲಕ ಗುಟೆರಸ್ ಹೊಸ ನೈತಿಕ ಕುಸಿತವನ್ನು ತಲುಪಿದ್ದಾರೆ ಎಂದು ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಆರೋಪಿಸಿದ್ದಾರೆ. ಕದನ ವಿರಾಮಕ್ಕಾಗಿ ಪ್ರಧಾನ ಕಾರ್ಯದರ್ಶಿಗಳ ಕರೆ ವಾಸ್ತವವಾಗಿ ಗಾಝಾದಲ್ಲಿ ಹಮಾಸ್ ಆಳ್ವಿಕೆಯನ್ನು ಉಳಿಸಿಕೊಳ್ಳುವ ಕರೆಯಾಗಿದೆ' ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ.