ಇಸ್ರೇಲ್ ಪ್ರಾಜೆಕ್ಟ್ ವಿರೋಧಿಸಿ ಪ್ರತಿಭಟಿಸಿದ ಗೂಗಲ್ ಉದ್ಯೋಗಿಗಳ ಬಂಧನ: ವರದಿ
Photo:X/@MPower_Change
ನ್ಯೂಯಾರ್ಕ್: ಗೂಗಲ್ ಸಂಸ್ಥೆಯು ಇಸ್ರೇಲಿ ಸರ್ಕಾರಕ್ಕೆ ಸೇವೆ ಒದಗಿಸುವ ಯೋಜನೆಯನ್ನು ವಿರೋಧಿಸಿ ಅಮೆರಿಕಾದ ಅಮೆರಿಕಾದ ನ್ಯೂಯಾರ್ಕ್ ನಗರ ಹಾಗೂ ಕ್ಯಾಲಿಫೋರ್ನಿಯಾದ ಸನ್ನಿವೇಲ್ನಲ್ಲಿರುವ ಗೂಗಲ್ ಕಚೇರಿಗಳಲ್ಲಿ ಪ್ರತಿಭಟಿಸಿದ ಹಲವಾರು ಉದ್ಯೋಗಿಗಳ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.
ವಾಷಿಂಗ್ಟನ್ ಪೋಸ್ಟ್ ವರದಿಯೊಂದರ ಪ್ರಕಾರ ಎರಡೂ ಕಚೇರಿಗಳಿಂದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಸ್ಥಳದಿಂದ ತೆರಳದೇ ಇದ್ದರೆ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಹೇಳುತ್ತಿರುವುದು ಹಾಗೂ ಅವರು ಅದಕ್ಕೆ ಜಗ್ಗದೇ ಇದ್ದಾಗ ಅವರನ್ನು ಬಂಧಿಸಿರುವ ವೀಡಿಯೋವೊಂದು ಹರಿದಾಡುತ್ತಿದೆ.
ಇಸ್ರೇಲಿ ಸರ್ಕಾರಕ್ಕೆ ಕ್ಲೌಡ್ ಸೇವೆಗಳು ಮತ್ತು ಡೇಟಾ ಸೆಂಟರ್ಗಳನ್ನು ಒದಗಿಸಲು ಅಮೆಝಾನ್ ಕಂಪೆನಿ ಜೊತೆಗೆ ಗೂಗಲ್ ಹೊಂದಿರುವ 1.2 ಬಿಲಿಯನ್ ಡಾಲರ್ ಒಪ್ಪಂದದಿಂದ ಹಿಂದಕ್ಕೆ ಸರಿಯಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.
ಹಲವಾರು ಗೂಗಲ್ ಉದ್ಯೋಗಿಗಳು ಕಂಪನಿಯ ನ್ಯೂಯಾರ್ಕ್, ಸನ್ನಿವೇಲ್ ಮತ್ತು ಸಿಯಾಟಲ್ ಕಚೇರಿಗಳೆದುರು ಜಮಾಯಿಸಿದ್ದರೆ ಪ್ರತಿಭಟನಾಕಾರರ ಒಂದು ಗುಂಪು ಗೂಗಲ್ ಕ್ಲೌಡ್ ಚೀಫ್ ಎಕ್ಸಿಕ್ಯೂಟಿವ್ ಥಾಮಸ್ ಕುರಿಯನ್ ಅವರ ಕಚೇರಿಯಲ್ಲಿ ಸುಮಾರು 10 ಗಂಟೆಗಳ ಕಾಲ ಉಳಿದಿತ್ತು.
“ಪ್ರಾಜೆಕ್ಟ್ ನಿಂಬಸ್ ಕೈಬಿಡಿ” ಎಂದು ಬರೆಯಲಾಗಿರುವ ಶರ್ಟ್ಗಳನ್ನು ಪ್ರತಿಭಟನಾಕಾರರು ಧರಿಸಿದ್ದರು.