ಕಿರ್ಗಿಸ್ಥಾನದಲ್ಲಿ ಗುಂಪು ದಾಳಿಗಳ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಮನೆಗಳಲ್ಲಿಯೇ ಇರಲು ಸೂಚಿಸಿದ ಭಾರತ ಸರ್ಕಾರ
PC : NDTV
ಹೊಸದಿಲ್ಲಿ: ಕಿರ್ಗಿಸ್ಥಾನದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಮನೆಗಳಲ್ಲಿಯೇ ಉಳಿದುಕೊಳ್ಳಲು ಭಾರತ ಸರ್ಕಾರ ಸಲಹೆ ನೀಡಿದೆ. ಕಿರ್ಗಿಸ್ಥಾನದಲ್ಲಿ ಹಲವು ಪಾಕಿಸ್ತಾನಿ ವಿದ್ಯಾರ್ಥಿಗಳ ಮೇಲೆ ಅವರ ಹಾಸ್ಟೆಲ್ಗಳಲ್ಲಿಯೇ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
“ನಾವು ನಮ್ಮ ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿ ಸದ್ಯ ಶಾಂತವಾಗಿದೆ ಆದರೂ ವಿದ್ಯಾರ್ಥಿಗಳು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮನೆಗಳಲ್ಲಿಯೇ ಇರುವುದು ಒಳ್ಳೆಯದು ಹಾಗೂ ಯಾವುದೇ ಸಮಸ್ಯೆಯಿದ್ದರೂ ಅಲ್ಲಿನ ಭಾರತೀಯ ದೂತಾವಾಸವನ್ನು ಸಂಪರ್ಕಿಸುವುದು ಒಳ್ಳೆಯದು. ನಮ್ಮ 24x7 ಸಂಪರ್ಕ ವಿಳಾಸ 0555710041,” ಎಂದು ಭಾರತೀಯ ಕಾನ್ಸುಲೇಟ್ ಟ್ವೀಟ್ ಮಾಡಿದೆ.
ಕಿರ್ಗಿಸ್ತಾನದ ದಾಳಿಯಲ್ಲಿ ಮೂವರು ಪಾಕ್ ವಿದ್ಯಾರ್ಥಿಗಳು ಹತರಾಗಿದ್ದಾರೆ ಎಂಬ ಕೆಲ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರ ಅಂತಹ ಯಾವುದೇ ವರದಿ ನಮಗೆ ಸಿಕ್ಕಿಲ್ಲ ಎಂದು ಹೇಳಿದೆ.
ಮೇ 13ರಂದು ಕಿರ್ಗಿಝ್ ಮತ್ತು ಈಜಿಪ್ಟ್ ದೇಶದ ವಿದ್ಯಾರ್ಥಿಗಳ ನಡುವೆ ಉಂಟಾದ ಜಗಳದ ನಂತರ ಹಿಂಸೆ ಅತಿಯಾಯಿತು ಎಂದು ಪಾಕ್ ರಾಯಭಾರ ಕಚೇರಿ ಹೇಳಿದೆ.
ಗುಂಪೊಂದು ಬಿಷ್ಕೆಕ್ ನಗರದಲ್ಲಿ ವೈದ್ಯಕೀಯ ವಿವಿಗಳ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿದ್ಯಾರ್ಥಿಗಳು ವಾಸವಿರುವ ಹಾಸ್ಟೆಲ್ಗಳನ್ನು ಗುರಿಯಾಗಿಸಿದೆ. ದಾಳಿಗಳಲ್ಲಿ ಯಾವುದೇ ಭಾರತೀಯ ವಿದ್ಯಾರ್ಥಿ ಗಾಯಗೊಂಡಿಲ್ಲ ಎಂದು ಹೇಳಲಾಗಿದೆ.