ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೊಳಿಸಿದ ಹಮಾಸ್

PC : thehindu.com
ಗಾಝಾ: ಗಾಝಾ ಕದನ ವಿರಾಮ ಒಪ್ಪಂದದ ಅನುಸಾರ ಐದನೇ ವಿನಿಮಯ ಪ್ರಕ್ರಿಯೆಯಡಿ ಶನಿವಾರ ಹಮಾಸ್ ಸಶಸ್ತ್ರ ಹೋರಾಟಗಾರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಗಾಝಾ ನಗರದಲ್ಲಿ ರೆಡ್ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಇಸ್ರೇಲ್ 183 ಕೈದಿಗಳನ್ನು ಬಿಡುಗಡೆಗೊಳಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆಯನ್ನು ಇಸ್ರೇಲ್ನ ಟೆಲ್ ಅವೀವ್ನಲ್ಲಿ ಅಳವಡಿಸಲಾಗಿದ್ದ ಬೃಹತ್ ಟಿವಿ ಪರದೆಯಲ್ಲಿ ನೇರಪ್ರಸಾರ ಮಾಡಲಾಗಿದ್ದು ಮುಸುಕುಧಾರಿ ಹಮಾಸ್ ಸದಸ್ಯರು ಒತ್ತೆಯಾಳುಗಳನ್ನು ರೆಡ್ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದಾಗ ಜನರ ಗುಂಪು ಹರ್ಷೋದ್ಘಾರ ಮಾಡಿತು. ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ನಡೆದ ವೇದಿಕೆಯಲ್ಲಿ ನಾಶಗೊಂಡ ಇಸ್ರೇಲ್ನ ಟ್ಯಾಂಕ್ ಮತ್ತು ಹತಾಶ ಮುಖಭಾವದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಚಿತ್ರವುಳ್ಳ ಬ್ಯಾನರ್ ಅಳವಡಿಸಲಾಗಿತ್ತು.
ಈಗ ವಾಷಿಂಗ್ಟನ್ ನಲ್ಲಿರುವ ನೆತನ್ಯಾಹು ಒತ್ತೆಯಾಳು ಬಿಡುಗಡೆಯ ಐದನೇ ಹಂತವನ್ನು ಅಲ್ಲಿಂದಲೇ ಪರಿಶೀಲಿಸುತ್ತಿದ್ದಾರೆ ಎಂದು ಇಸ್ರೇಲ್ ಪ್ರಧಾನಿಯ ಕಚೇರಿ ಹೇಳಿದೆ. ಹಮಾಸ್ ಇದುವರೆಗೆ 18 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದು ಇದಕ್ಕೆ ಪ್ರತಿಯಾಗಿ ಸುಮಾರು 600 ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಕದನ ವಿರಾಮ ಒಪ್ಪಂದದ ಪ್ರಥಮ ಹಂತದ 42 ದಿನಗಳಲ್ಲಿ ಹಮಾಸ್ ವಶದಲ್ಲಿರುವ 33 ಒತ್ತೆಯಾಳುಗಳು ಬಿಡುಗಡೆಯಾಗಲಿದ್ದಾರೆ. ಎರಡನೇ ಹಂತದ ಕದನ ವಿರಾಮ ಒಪ್ಪಂದದ ಬಗ್ಗೆ ಚರ್ಚಿಸಲು ಖತರ್, ಈಜಿಪ್ಟ್ ಮತ್ತು ಅಮೆರಿಕದ ಪ್ರತಿನಿಧಿಗಳು ಫೆಬ್ರವರಿ 10ರಂದು ಖತರ್ನ ದೋಹಾದಲ್ಲಿ ಸಭೆ ನಡೆಸಲಿದ್ದಾರೆ.