ಹಮಾಸ್ ಮುಖ್ಯಸ್ಥನ ಮೂವರು ಮಕ್ಕಳು, ಇಬ್ಬರು ಮೊಮ್ಮಕ್ಕಳು ಇಸ್ರೇಲ್ ವಾಯುದಾಳಿಯಲ್ಲಿ ಹತ್ಯೆ
ಇಸ್ರೇಲ್ ನ ವಾಯುದಾಳಿಯಲ್ಲಿ ಹತರಾದ ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಪುತ್ರರು Photo: twitter.com/resist_toexist
ಕೈರೋ: ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಪುತ್ರರು ಹಾಗೂ ಇಬ್ಬರು ಮೊಮ್ಮಕ್ಕಳು ಗಾಝಾದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಗೆ ಬಲಿಯಾಗಿದ್ದಾರೆ ಎಂದು ಫೆಲೆಸ್ತೀನ್ ಇಸ್ಲಾಮಿಸ್ಟ್ ಗ್ರೂಪ್ ಪ್ರಕಟಿಸಿದೆ.
ಗಾಝಾದ ಅಲ್-ಶತಿ ಶಿಬಿರದ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ನಡೆಸಿದ ವಾಯುದಾಳಿಯಲ್ಲಿ ಹಝೇಮ್, ಅಮೀರ್ ಹಾಗೂ ಮುಹಮ್ಮದ್ ಹತರಾಗಿದ್ದಾರೆ. ಅಂತೆಯೇ ಇಸ್ಮಾಯಿಲ್ ಅವರ ಇಬ್ಬರು ಮೊಮ್ಮಕ್ಕಳು ಕೂಡಾ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾಗಿ ಹಮಾಸ್ ಮಾಧ್ಯಮ ಹೇಳಿದೆ.
"ನಮ್ಮ ಬೇಡಿಕೆಗಳು ಸ್ಪಷ್ಟ ಮತ್ತು ನಿರ್ದಿಷ್ಟ. ಅವರಿಗೆ ಯವುದೇ ರಿಯಾಯಿತಿ ಇಲ್ಲ. ನನ್ನ ಮಕ್ಕಳ ರಕ್ತ, ಜನಸಾಮಾನ್ಯರ ರಕ್ತಕ್ಕಿಂತ ತುಟ್ಟಿಯೇನೂ ಅಲ್ಲ. ಸಂಧಾನ ಮಾತುಕತೆ ಕೊನೆ ಹಂತದಲ್ಲಿರುವಾಗ ನಮ್ಮ ಮಕ್ಕಳನ್ನು ಅವರು ಗುರಿ ಮಾಡಿದರೆ, ಅವರಿಗೆ ಭ್ರಮನಿರಸನವಾಗಲಿದೆ." ಎಂದು ಅಲ್ ಜಝೀರಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹನಿಯೆಹ್ ಎಚ್ಚರಿಕೆ ನೀಡಿದ್ದಾರೆ.
ಹಮಾಸ್ ನ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಹನಿಯೆಹ್ ಅತ್ಯಂತ ಕಟುಮಾತಿಗೆ ಹೆಸರಾಗಿದ್ದು, ಗಾಝಾಪಟ್ಟಿಯಲ್ಲಿ ಇಸ್ರೇಲ್ ಜತೆಗಿನ ಯುದ್ಧದ ವೇಳೆ ನವೆಂಬರ್ ನಲ್ಲಿ ಇವರ ಕುಟುಂಬಕ್ಕೆ ಸೇರಿದ ಮನೆ ಧ್ವಂಸವಾಗಿತ್ತು.