ಅಲ್-ಶಿಫಾ ಆಸ್ಪತ್ರೆಯ ಆವರಣಕ್ಕೆ ಇಸ್ರೇಲ್ ದಾಳಿ: ಹಲವರು ಮೃತ್ಯು
Photo- PTI
ಗಾಝಾ : ಗಾಝಾದ ಅಲ್-ಶಿಫಾ ಆಸ್ಪತ್ರೆ ನಿರಂತರ ಬಾಂಬ್ ದಾಳಿಗೆ ತುತ್ತಾಗಿದ್ದು ಹಲವರು ಮೃತಪಟ್ಟಿದ್ದಾರೆ. ಗಾಝಾದಲ್ಲಿರುವ ಇತರ 20 ಆಸ್ಪತ್ರೆಗಳ ಕಾರ್ಯನಿರ್ವಹಣೆಯೂ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ಶುಕ್ರವಾರ ಹೇಳಿದ್ದಾರೆ.
ಮೃತರ ಅಥವಾ ಗಾಯಗೊಂಡವರ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಆದರೆ ಬಾಂಬ್ ದಾಳಿ ನಡೆದಿರುವುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮಾರ್ಗರೆಟ್ ಹ್ಯಾರಿಸ್ ಹೇಳಿದ್ದಾರೆ. ಅಲ್-ಶಿಫಾ ಆಸ್ಪತ್ರೆಯನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆದಿರುವುದನ್ನು ಹಮಾಸ್ ದೃಢಪಡಿಸಿದ್ದು 13 ಮಂದಿ ಮೃತಪಟ್ಟಿದ್ದಾರೆ . ಇತರ ಹಲವರು ಗಾಯಗೊಂಡಿದ್ದಾರೆ ಎಂದಿದೆ. ಇಸ್ರೇಲಿ ಟ್ಯಾಂಕ್ ಗಳು ಅಲ್-ಶಿಫಾ ಆಸ್ಪತ್ರೆಯತ್ತ ಗುಂಡಿನ ದಾಳಿ ನಡೆಸಿದೆ ಎಂದು ಆಸ್ಪತ್ರೆಯ ನಿರ್ದೇಶಕ ಮುಹಮ್ಮದ್ ಸಲ್ಮಿಯಾ ಹೇಳಿದ್ದಾರೆ. ಅಲ್-ಶಿಫಾ ಆಸ್ಪತ್ರೆಯ ಆವರಣದಲ್ಲಿ ಮಕ್ಕಳ ಸಹಿತ ಹಲವರ ಮೃತದೇಹಗಳನ್ನು ಇರಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.
ಗಾಝಾದ ಅಲ್-ರಾಂಟಿಸಿ ಮಕ್ಕಳ ಆಸ್ಪತ್ರೆ ಮತ್ತು ಅಲ್- ನಾಸಿರ್ ಮಕ್ಕಳ ಆಸ್ಪತ್ರೆಗಳ ಮೇಲೆಯೂ ಶುಕ್ರವಾರ ಸರಣಿ ಬಾಂಬ್ ದಾಳಿ ನಡೆದಿದೆ ಎಂದು ಹಮಾಸ್ ಹೇಳಿದೆ.
ಗಾಝಾದಲ್ಲಿ ಆಸ್ಪತ್ರೆಗಳನ್ನು, ವಿಶೇಷವಾಗಿ ಅಲ್-ಶಿಫಾ ಆಸ್ಪತ್ರೆಯನ್ನು ಹಮಾಸ್ ತನ್ನ ಕಾರ್ಯಾಚರಣೆಯ ಸಮನ್ವಯ ಕೇಂದ್ರವಾಗಿ ಬಳಸುತ್ತಿದ್ದು ಆಸ್ಪತ್ರೆಗಳಲ್ಲಿ ಹಮಾಸ್ ಕಮಾಂಡರ್ ಗಳು ಅಡಗಿದ್ದಾರೆ ಎಂದು ಇಸ್ರೇಲ್ ಸೇನೆ ಪ್ರತಿಪಾದಿಸುತ್ತಿದೆ.
ಆಸ್ಪತ್ರೆಯ ಮೇಲಿನ ದಾಳಿಯನ್ನು ಖಂಡಿಸಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ನಿಗಾ ಸಮಿತಿ ‘ಅಲ್-ಶಿಫಾದ ಮೇಲೆ ನಡೆಯುತ್ತಿರುವ ದಾಳಿ ಮತ್ತು ಆಸ್ಪತ್ರೆಯ ಬಳಿ ನಡೆಯುತ್ತಿರುವ ಸಂಘರ್ಷದಿಂದ ತೀವ್ರ ಕಳವಳಗೊಂಡಿದ್ದು ಅಲ್ಲಿರುವ ಸಾವಿರಾರು ನಾಗರಿಕರ ಸುರಕ್ಷತೆಯ ಬಗ್ಗೆ ಆತಂಕವಿದೆ’ ಎಂದು ಪ್ರತಿಕ್ರಿಯಿಸಿದೆ. ಒಂದು ತಿಂಗಳಿಂದ ಮುಂದುವರಿದಿರುವ ಗಾಝಾ ಸಂಘರ್ಷದಿಂದ ಗಾಝಾದ 35 ಆಸ್ಪತ್ರೆಗಳಲ್ಲಿ 18 ಆಸ್ಪತ್ರೆಗಳು ಹಾಗೂ ಇತರ 40 ಆರೋಗ್ಯ ಕೇಂದ್ರಗಳು ವೈಮಾನಿಕ ದಾಳಿಯಿಂದ ಅಥವಾ ಇಂಧನ ಕೊರತೆಯಿಂದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.