ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ, ವಿಮೋಚನಾ ಸಂಘಟನೆ: ಟರ್ಕಿ ಅಧ್ಯಕ್ಷ ಎರ್ದೋಗನ್
Photo:twitter/RTErdogan
ಅಂಕಾರ: ಇಸ್ರೇಲ್ ಗಾಝಾದ ಮೇಲೆ ಆಕ್ರಮಣ ಮುಂದುವರೆಸುತ್ತಿರುವ ನಡುವೆಯೇ, ಹಮಾಸ್ ಪರ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗನ್ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ ಎಂದು ಹೇಳಿದ್ದಾರೆ.
ತನ್ನ ಭೂಮಿಯನ್ನು ರಕ್ಷಿಸಲು ಹೋರಾಟ ನಡೆಸುತ್ತಿರುವ ವಿಮೋಚನಾ ಸಂಘಟನೆ ಹಮಾಸ್ ಎಂದು ಎರ್ದೋಗನ್ ಬುಧವಾರ ಹೇಳಿದ್ದಾರೆ.
ದೇಶದ ಸಂಸತ್ತಿನಲ್ಲಿ ತನ್ನ ಪಕ್ಷದ ಶಾಸಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಎರ್ದೋಗನ್ ಇಸ್ರೇಲ್ ಮತ್ತು ಹಮಾಸ್ ತಕ್ಷಣ ಕದನ ವಿರಾಮವನ್ನು ಘೋಷಿಸುವಂತೆ ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಶಾಶ್ವತ ಶಾಂತಿಗಾಗಿ ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಗಾಝಾ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಬೇಕು ಎಂದು ಅವರು ವಿಶ್ವ ಶಕ್ತಿಗಳನ್ನು ವಿನಂತಿಸಿದ್ದಾರೆ.
ಟರ್ಕಿಯ ಸದುದ್ದೇಶದ ಲಾಭವನ್ನು ಇಸ್ರೇಲ್ ಪಡೆದುಕೊಂಡಿದೆ, ಮತ್ತು ಈ ಹಿಂದೆ ಯೋಜಿಸಿದಂತೆ ತಾನು ಇಸ್ರೇಲ್ಗೆ ಹೋಗುವುದಿಲ್ಲ ಎಂದು ಎರ್ದೋಗನ್ ಹೇಳಿದ್ದಾರೆ.
ಮಾನವೀಯ ಸಹಾಯಕ್ಕಾಗಿ ರಫಾ ಗಡಿ ಗೇಟ್ ಅನ್ನು ತೆರೆದಿರಬೇಕು ಎಂದು ಆಗ್ರಹಿಸಿದ ಅವರು, ಎರಡು ಕಡೆಯ ನಡುವಿನ ಕೈದಿಗಳ ವಿನಿಮಯವನ್ನು ತುರ್ತಾಗಿ ಮುಕ್ತಾಯಗೊಳಿಸಬೇಕು ಎಂದು ಎರ್ದೋಗನ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ನಿಲ್ಲಿಸಲು ವಿಶ್ವಸಂಸ್ಥೆಯ ʼಅಸಾಮರ್ಥ್ಯʼದ ಬಗ್ಗೆ ಎರ್ದೋಗನ್ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.